ಇಂಗ್ಲೆಂಡ್‌ ವಿರುದ್ಧ ನಡೆಯುವ 2ನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಯುವನಾಯಕ ಶುಭಮನ್‌ ಗಿಲ್‌ ಸ್ಮರಣೀಯ ದ್ವಿಶತಕ ಸಿಡಿಸಿದ್ದಾರೆ. ಈ ಮೂಲಕ ಹಲವು ದಿಗ್ಗಜರ ದಾಖಲೆಗಳನ್ನ ನುಚ್ಚುನೂರು ಮಾಡಿದ್ದಾರೆ. ಸದ್ಯ ಆಂಗ್ಲರ ಬೆವರಿಳಿಸುತ್ತಿರುವ ಕ್ಯಾಪ್ಟನ್‌ ಗಿಲ್‌ 136 ಓವರ್‌ಗಳ ಅಂತ್ಯದ ವೇಳೆಗೆ 362 ಎಸೆತಗಳಲ್ಲಿ 256 ರನ್‌ ಬಾರಿಸಿ ಅಜೇಯರಾಗುಳಿದಿದ್ದಾರೆ.

ಎಡ್ಜ್‌ಬಾಸ್ಟನ್​ನಲ್ಲಿ ನಡೆಯುತ್ತಿರುವ ಆತಿಥೇಯ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಇದೀಗ ಈ ದ್ವಿಶತಕದ ಜೊತೆಗೆ ಇಂಗ್ಲೆಂಡ್‌ ನೆಲದಲ್ಲಿ ಅದರಲ್ಲೂ ಟೆಸ್ಟ್ಟ್ ಪಂದ್ಯದ ಇನ್ನಿಂಗ್ಸ್​ವೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತದ ಆಟಗಾರನೆಂಬ ದಾಖಲೆ ಕೂಡ ನಿರ್ಮಿಸಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಈ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 222 ರನ್ ಬಾರಿಸಿದ ಕೂಡಲೇ ಗಿಲ್, ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಮೊದಲು ಗವಾಸ್ಕರ್ ಇನ್ನಿಂಗ್ಸ್​ವೊಂದರಲ್ಲಿ 221 ರನ್​ ಬಾರಿಸುವ ಮೂಲಕ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಇದೀಗ ಆ ದಾಖಲೆ ಶುಭ್​ಮನ್ ಗಿಲ್ ಪಾಲಾಗಿದೆ.