


ಪುತ್ತೂರು: ಬೆಳ್ತಂಗಡಿಯ ಯುವಕನೋರ್ವನನ್ನು ರಿಕ್ಷಾದಲ್ಲಿ ಅಪಹರಿಸಿ, ಎರಡು ದಿನಗಳ ಕಾಲ ಗುಡ್ಡವೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೆದಿಲದಲ್ಲಿ ನಡೆದಿದೆ. ಕಾಸರಗೋಡಿನಲ್ಲಿ ಬೇಕರಿ ಉದ್ಯಮ ನಡೆಸುತ್ತಿರುವ ಬೆಳ್ತಂಗಡಿ ತಾಲೂಕಿನ ತೆಕ್ಕಾರು ನಿವಾಸಿ ಮಹಮ್ಮದ್ ಇರ್ಷಾದ್ (26) ಹಲ್ಲೆಗೊಳಗಾದ ದುರ್ದೈವಿ.
ಮೇ 25ರಂದು ಇರ್ಷಾದ್ ಅವರು ಕಾಸರಗೋಡಿನಿಂದ ತಮ್ಮ ಮನೆಗೆ ಬಂದಿದ್ದರು. ಅಂದು ಸಂಜೆ ತಮ್ಮ ಅಕ್ಕನನ್ನು ಕರುವೇಲು ಎಂಬಲ್ಲಿ ಬಿಟ್ಟು, ಕೆದಿಲ ಗ್ರಾಮದ ಗಡಿಯಾರ ಮಸೀದಿ ಬಳಿ ಸ್ಕೂಟರ್ ಅನ್ನು ತನ್ನ ಬಾವನಿಗೆ ನೀಡಲು ಕಾಯುತ್ತಾ ನಿಂತಿದ್ದರು. ಈ ವೇಳೆ ಅಲ್ಲಿಗೆ ಆಟೋ ರಿಕ್ಷಾದಲ್ಲಿ ಬಂದ ಪರಿಚಯಸ್ಥರಾದ ಆಸೀಫ್ (ಅಚ್ಚಿ), ಶಾಕೀರ್ ಮತ್ತು ಮತ್ತೊಬ್ಬ ಆಸೀಫ್ ಎಂಬುವವರು ಇರ್ಷಾದ್ ಅವರನ್ನು ಬಲವಂತವಾಗಿ ರಿಕ್ಷಾಕ್ಕೆ ಎಳೆದುಕೊಂಡು ಅಪಹರಿಸಿದ್ದಾರೆ.


ಅಪಹರಣಕಾರರು ಇರ್ಷಾದ್ ಅವರನ್ನು ಸಜೀಪ ಎಂಬಲ್ಲಿನ ನಿರ್ಜನ ಗುಡ್ಡಕ್ಕೆ ಕರೆದೊಯ್ದು. ಮೇ 26ರ ರಾತ್ರಿಯವರೆಗೂ ಅಲ್ಲಿಯೇ ಇರಿಸಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮೇ 27ರಂದು ಮುಂಜಾನೆ ಆರೋಪಿಗಳೆಲ್ಲರೂ ನಿದ್ರೆಯಲ್ಲಿದ್ದಾಗ, ಪ್ರಾಣಭಯದಿಂದ ಇರ್ಷಾದ್ ಅಲ್ಲಿಂದ ಯಾರಿಗೂ ತಿಳಿಯದಂತೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಅಲ್ಲಿಂದ ನೇರವಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳ ಪೈಕಿ ಶಾಕೀರ್ ಎಂಬಾತ ಇರ್ಷಾದ್ ಅವರಿಗೆ ಹಣ ನೀಡಬೇಕಿತ್ತು. ತನಗೆ ಬರಬೇಕಾದ ಸಾಲದ ಹಣವನ್ನು ವಾಪಸ್ ಕೇಳಿದ್ದಕ್ಕಾಗಿಯೇ ಈ ಮೂವರು ಸೇರಿ ತನ್ನನ್ನು ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂದು ಇರ್ಷಾದ್ ಆರೋಪಿಸಿದ್ದಾರೆ.
