


ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೌರಾ (Howrah) ನಗರದಲ್ಲಿ ಸಾರ್ವಜನಿಕರನ್ನು ಭಯಭೀತಿಗೊಳಿಸುತ್ತಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್ ಹಾಗೂ ರೌಡಿ ಆಕಾಶ್ ಸಿಂಗ್ (Akash Singh) ಅಹಂಕಾರವನ್ನು ಪೊಲೀಸರು ಅಡಗಿಸಿದ್ದಾರೆ.
ಕೇವಲ ಒಳ ಉಡುಪಿನಲ್ಲಿ (ಬನಿಯನ್ ಮತ್ತು ಅಂಡರ್‌ವೇರ್) ಸಾರ್ವಜನಿಕವಾಗಿ ರಸ್ತೆಯುದ್ದಕ್ಕೂ ಪರೇಡ್ (Parade) ಮಾಡುವ ಮೂಲಕ ಹೌರಾ ಪೊಲೀಸರು ಕಾನೂನಿಗೆ ಇರುವ ಶಕ್ತಿಯನ್ನು ತೋರಿಸಿದ್ದಾರೆ.


ಹೌರಾ ಭಾಗದಲ್ಲಿ ತಾನೊಬ್ಬ ದೊಡ್ಡ ‘ಡಾನ್’ ಎಂದು ಬಿಂಬಿಸಿಕೊಂಡು ವಸೂಲಿ ದಂಧೆ, ಹಫ್ತಾ ವಸೂಲಿ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದ ಆಕಾಶ್ ಸಿಂಗ್‌ನನ್ನು ಇತ್ತೀಚೆಗಷ್ಟೇ ಪೊಲೀಸರು ಹೆಡೆಮುರಿ ಕಟ್ಟಿದ್ದರು.
ತನಿಖೆಯ ಭಾಗವಾಗಿ ಪೊಲೀಸರು ಆತನನ್ನು ಮಾಲಿಪಾಂಚ್‌ಘರಾ ಮತ್ತು ಗೋಲಾಬಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯ ಅಪರಾಧ ನಡೆದ ಸ್ಥಳಗಳಿಗೆ ಕರೆದೊಯ್ದು ಮಹಜರು (ಅಪರಾಧದ ಮರುಸೃಷ್ಟಿ) ನಡೆಸಿದರು. ಈ ವೇಳೆ ಆತನ ತಲೆ ಹಾಗೂ ಗಡ್ಡವನ್ನು ಸಂಪೂರ್ಣವಾಗಿ ಬೋಳಿಸಿ, ಕೇವಲ ಬನಿಯನ್ ಮತ್ತು ಅಂಡರ್‌ವೇರ್ ಧರಿಸಿ ಸಾರ್ವಜನಿಕವಾಗಿ ರಸ್ತೆಯಲ್ಲಿ ನಡೆಸಿಕೊಂಡು ಹೋಗಲಾಯಿತು.
