


ಖತಿಮಾ, ಉತ್ತರಾಖಂಡ (ಮೇ.22): ಶಾಲಾ ಶಿಕ್ಷಕಿಯೊಬ್ಬರ ಸ್ಕೂಟಿಗೆ ಕಾಡಾನೆ ಡಿಕ್ಕಿ ಹೊಡೆದ ಪರಿಣಾಮ, ಆನೆಯ ದಂತವು ಸ್ಕೂಟಿಯ ಹೆಡ್‌ಲೈಟ್‌ನಲ್ಲಿ ಸಿಲುಕಿ ಮೂರು ತುಂಡುಗಳಾಗಿ ಮುರಿದು ಬಿದ್ದಿರುವ ಅತ್ಯಂತ ವಿಚಿತ್ರ ಹಾಗೂ ಆಘಾತಕಾರಿ ಘಟನೆಯೊಂದು ಉತ್ತರಾಖಂಡದ ಖತಿಮಾದಲ್ಲಿ ನಡೆದಿದೆ. ಆನೆಯ ಭೀಕರ ದಾಳಿಯ ನಡುವೆಯೂ ಮಹಿಳಾ ಶಿಕ್ಷಕಿ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಮಹಿಳಾ ಶಿಕ್ಷಕಿಯನ್ನು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ನಿಕಿತಾ ಕಾಪ್ಡಿ ಎಂದು ಗುರುತಿಸಲಾಗಿದೆ. ಪ್ರಜ್ಞೆ ತಪ್ಪಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಡೆದಿದ್ದೇನು?: ಬೆಳಗ್ಗೆ 6:45 ರ ಸುಮಾರಿಗೆ ಘಟನೆ
ವರದಿಗಳ ಪ್ರಕಾರ, ನಿಕಿತಾ ಕಾಪ್ಡಿ ಅವರು ಪ್ರತಿದಿನದಂತೆ ಬೆಳಗ್ಗೆ ಸುಮಾರು 6.45ರ ವೇಳೆಗೆ ತಮ್ಮ ಸ್ಕೂಟಿಯಲ್ಲಿ ಶಾಲೆಗೆ ಹೊರಟಿದ್ದರು. ಖತಿಮಾದ ಚಕರ್ಪುರ ಬನಖಂಡಿ ದೇವಸ್ಥಾನದ ಸಮೀಪದ ರಸ್ತೆಯಲ್ಲಿ ಅವರು ಚಲಿಸುತ್ತಿದ್ದಾಗ, ಹತ್ತಿರದ ದಟ್ಟ ಅರಣ್ಯದಿಂದ ದಿಢೀರನೆ ಆನೆಯೊಂದು ರಸ್ತೆ ದಾಟಲು ಮುನ್ನುಗ್ಗಿ ಬಂದಿದೆ. ಈ ವೇಳೆ ನಿಯಂತ್ರಣ ಸಿಗದೆ ನಿಕಿತಾ ಅವರ ಸ್ಕೂಟಿ ನೇರವಾಗಿ ಆನೆಗೆ ಡಿಕ್ಕಿ ಹೊಡೆದಿದೆ.


ಹೆಡ್‌ಲೈಟ್‌ನಲ್ಲಿ ಸಿಲುಕಿದ ದಂತ; ಆನೆಗೆ ಬಂದಿತ್ತು ವಿಪರೀತ ಕೋಪ
ಅಪಘಾತದ ತೀವ್ರತೆಗೆ ಸ್ಕೂಟಿಯು ಆನೆಯ ಸೊಂಡಿಲಿಗೆ ಬಡಿದಿದೆ. ಈ ಸಂದರ್ಭದಲ್ಲಿ ಆನೆಯ ಬಲವಾದ ದಂತವು ಸ್ಕೂಟಿಯ ಮುಂಭಾಗದ ಹೆಡ್‌ಲೈಟ್ ಗಾಜಿನೊಳಗೆ ಸಿಲುಕಿಕೊಂಡಿದೆ. ಇದರಿಂದ ವಿಚಲಿತಗೊಂಡು ತೀವ್ರ ಕೋಪಗೊಂಡ ಆನೆಯು ತನ್ನ ದಂತವನ್ನು ಬಿಡಿಸಿಕೊಳ್ಳಲು ಸ್ಕೂಟಿಯನ್ನು ಎರಡು-ಮೂರು ಬಾರಿ ಜೋರಾಗಿ ನೆಲಕ್ಕೆ ಅಪ್ಪಳಿಸಿದೆ. ಈ ಭೀಕರ ದೃಶ್ಯವನ್ನು ಕಂಡು ತೀವ್ರ ಭಯಭೀತರಾದ ಶಿಕ್ಷಕಿ ನಿಕಿತಾ ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾರೆ.
