ತಿರುಪತಿ (ಮೇ.22): ಕಲಿಯುಗದ ಪ್ರತ್ಯಕ್ಷ ದೈವ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಬರುವ ಸಾಮಾನ್ಯ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನದ (TTD) ಆಡಳಿತ ಮಂಡಳಿಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮೇಲೆ ಸಾಮಾನ್ಯ ಭಕ್ತರು ತಿರುಪತಿಯಲ್ಲಿ ಗಂಟೆಗಟ್ಟಲೆ ಕಾಯದೇ ಅತ್ಯಂತ ವೇಗವಾಗಿ ಶ್ರೀವಾರಿ ದರ್ಶನ ಪಡೆಯಲು ಟಿಟಿಡಿ ಕ್ರಾಂತಿಕಾರಿ ನಿರ್ಧಾರವೊಂದನ್ನು ಕೈಗೊಂಡಿದೆ. ಇನ್ನು ಮುಂದೆ ಪ್ರತಿದಿನ ಮುಂಜಾನೆ ಸ್ವಾಮಿಗೆ ನಡೆಯುವ ಅತ್ಯಂತ ಪವಿತ್ರವಾದ ‘ಅಭಿಷೇಕ ಸೇವೆ’ಯ (Abhishekam Seva) ಸಮಯದಲ್ಲಿಯೂ ಸಾಮಾನ್ಯ ಭಕ್ತರಿಗೆ ದರ್ಶನ ಕಲ್ಪಿಸಲು ಟಿಟಿಡಿ ಮುಂದಾಗಿದೆ.

ರಜಾದಿನಗಳ ಹಿನ್ನೆಲೆಯಲ್ಲಿ ತಿರುಮಲದಲ್ಲಿ ಭಕ್ತರ ರಶ್ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಮತ್ತು ಸಾಮಾನ್ಯ ಭಕ್ತರಿಗೆ ಮೊದಲ ಆದ್ಯತೆ ನೀಡಲು ಇತ್ತೀಚೆಗೆ ವಿಐಪಿ ಬ್ರೇಕ್ ದರ್ಶನಗಳನ್ನು (VIP Break Darshan) ಸಂಪೂರ್ಣವಾಗಿ ರದ್ದುಗೊಳಿಸಲಾಗಿತ್ತು. ಇದರ ಯಶಸ್ಸಿನ ಬೆನ್ನಲ್ಲೇ, ಭಕ್ತರ ಅನುಕೂಲಕ್ಕಾಗಿ ಮತ್ತೊಂದು ಪ್ರಮುಖ ನಿರ್ಧಾರ ಮಾಡಲಾಗಿದೆ ಎಂದು ಟಿಟಿಡಿ ಹೆಚ್ಚುವರಿ ಇಒ (Additional EO) ವೆಂಕಯ್ಯ ಚೌದರಿ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ದಿನಕ್ಕೆ 15,000 ಭಕ್ತರಿಗೆ ಹೆಚ್ಚುವರಿ ದರ್ಶನ ಭಾಗ್ಯ!

ಸ್ವಾಮಿಯ ಅಭಿಷೇಕ ಸೇವೆಯ ಸಮಯದಲ್ಲಿ ಕೇವಲ ಗಣ್ಯರಿಗೆ ಮಾತ್ರ ಅವಕಾಶವಿರುತ್ತಿತ್ತು. ಆದರೆ ಈಗ ಆ ಸಮಯದಲ್ಲಿಯೂ ಸರ್ವದರ್ಶನ ಹಾಗೂ ಧರ್ಮದರ್ಶನದ ಕ್ಯೂ ಲೈನ್‌ಗಳಲ್ಲಿ ನಿಲ್ಲುವ ಸುಮಾರು 5,000 ಭಕ್ತರನ್ನು ದರ್ಶನಕ್ಕೆ ಬಿಡಲು ನಿರ್ಧರಿಸಲಾಗಿದೆ. ಈ ಹೊಸ ವ್ಯವಸ್ಥೆಯಿಂದಾಗಿ ದಿನದ ವಿವಿಧ ಅವಧಿಗಳನ್ನು ಲೆಕ್ಕಹಾಕಿದರೆ ಪ್ರತಿದಿನ ಹೆಚ್ಚುವರಿಯಾಗಿ ಬರೋಬ್ಬರಿ 15,000 ಸಾಮಾನ್ಯ ಭಕ್ತರಿಗೆ ಯಾವುದೇ ಅಡೆತಡೆಯಿಲ್ಲದೆ ಶ್ರೀಲಕ್ಷ್ಮೀ ವೆಂಕಟೇಶ್ವರನ ದರ್ಶನ ಭಾಗ್ಯ ಸಿಗಲಿದೆ.