ಮಡಿಕೇರಿ: ಕೊಡಗು ಜಿಲ್ಲೆ ದುಬಾರೆ ಶಿಬಿರದಲ್ಲಿ ಎರಡು ಸಾಕಾನೆಗಳ ಕಾದಾಟದ ವೇಳೆ ಅನಿರೀಕ್ಷಿತವಾಗಿ ಆಯತಪ್ಪಿ ಬಿದ್ದ ಆನೆಯ ಕೆಳಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಬಿ ಖಂಡ್ರೆ ಸಂತಾಪ ಸೂಚಿಸಿದ್ದಾರೆ.

ಇದು ಅತ್ಯಂತ ಆಘಾತಕರ ಘಟನೆ, ಆನೆಗಳನ್ನು ಸ್ನಾನ ಮಾಡಿಸುವಾಗ ತಮಿಳುನಾಡಿನ ಪ್ರವಾಸಿ ಮಹಿಳೆ ತುಳಸಿ (33) ನದಿಯ ಬಳಿ ನಿಂತು ನೋಡುತ್ತಿದ್ದರು. ಈ ವೇಳೆ ಆನೆಗಳ ನಡುವೆ ಕಾದಾಟ ಶುರುವಾಗಿದ್ದು, ಆಯತಪ್ಪಿ ಬಿದ್ದ ಆನೆಯ ಕೆಳಗೆ ಸಿಲುಕಿ ಮಹಿಳೆ ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.