


ಬೆಂಗಳೂರು: ನೀಟ್ (NEET) ಪರೀಕ್ಷೆ ಅಕ್ರಮ ಖಂಡಿಸಿ ಮೇ 21 ರಂದು ಹಮ್ಮಿಕೊಳ್ಳಲಾಗಿರುವ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆಯು ತಳ್ಳಾಟ, ನೂಕಾಟ ಮತ್ತು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಬೆಂಗಳೂರಿನ ಕೆಪಿಸಿಸಿ (KPCC) ಕಚೇರಿಯಲ್ಲಿ ನಡೆದಿದೆ. ಯುವ ಕಾಂಗ್ರೆಸ್‌ನ (Youth Congress) ಎರಡು ಬಣಗಳ ನಡುವಿನ ಭಿನ್ನಾಭಿಪ್ರಾಯ ಬೀದಿಗೆ ಬಂದಿದ್ದು, ಸಭೆಯು ರಣರಂಗವಾಗಿ ಮಾರ್ಪಟ್ಟಿದೆ.
ರಾಷ್ಟ್ರೀಯ ಯುವ ಕಾಂಗ್ರೆಸ್ ಆದೇಶದ ಮೇರೆಗೆ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಅವರನ್ನು ಇತ್ತೀಚೆಗಷ್ಟೇ ಅವರ ಸ್ಥಾನದಿಂದ ಕೈಬಿಡಲಾಗಿತ್ತು. ಈ ಕ್ರಮದ ವಿರುದ್ಧ ದೀಪಿಕಾ ರೆಡ್ಡಿ ಬೆಂಬಲಿಗರಲ್ಲಿ ತೀವ್ರ ಅಸಮಾಧಾನವಿತ್ತು. ಇಂದು ಕೆಪಿಸಿಸಿ ಕಚೇರಿಯಲ್ಲಿ ಮೇ 21ರ ಪ್ರತಿಭಟನೆಯ ಸಿದ್ಧತೆಗಾಗಿ ಅಧಿಕೃತ ಸಭೆ ಕರೆಯಲಾಗಿದ್ದಾಗ ಈ ಆಕ್ರೋಶ ಸ್ಫೋಟಗೊಂಡಿದೆ.


ಸಭೆ ಆರಂಭವಾಗುತ್ತಿದ್ದಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ಹಾಗೂ ಮಾಜಿ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಅವರ ಬೆಂಬಲಿಗರ ನಡುವೆ ತೀವ್ರ ವಾಕ್ಸಮರ ಶುರುವಾಗಿದೆ. ದೀಪಿಕಾ ರೆಡ್ಡಿ ಅವರನ್ನು ಸ್ಥಾನದಿಂದ ಕೈಬಿಟ್ಟ ಕ್ರಮವನ್ನು ವಿರೋಧಿಸಿ ಸಭೆಯಲ್ಲಿ ಘೋಷಣೆಗಳನ್ನು ಕೂಗಲಾರಂಭಿಸಿದರು.
