


ಪುತ್ತೂರು: ಶಾಸಕ ಅಶೋಕ್ ರೈ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಕಬಕ- ವಿಟ್ಲ ಚತುಷ್ಪಥ ರಸ್ತೆ ಕಾಮಗಾರಿಗೆ ಕಾಲ ಕೂಡಿ ಬಂದಿದೆ. ಈ ರಸ್ತೆಯ ಅಭಿವೃದ್ದಿಗೆ ಈಗಾಗಲೇ ಮಾಸ್ಟರ್ ಪ್ಲಾನ್ ರಚನೆ ಮಾಡಲಾಗಿದ್ದು ರಸ್ತೆ ಅಭಿವೃದ್ದಿಗೆ ಮುನ್ನ ಈ ರಸ್ತೆಯಲ್ಲಿ ಅಗಲ ಕಿರಿದಾದ ಚಂದಳಿಕೆ ಮತ್ತು ಕಂಬಳ ಬೆಟ್ಟು ರಸ್ತೆಯ ಅಭಿವೃದ್ದಿಗೆ ಲೋಕೋಪಯೋಗಿ ಇಲಾಖೆಯಿಂದ 10 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
ಕಬಕದಿಂದ ವಿಟ್ಲಕ್ಕೆ ತೆರಳುವ ರಸ್ತೆಯು ಅನೇಕ ವರ್ಷಗಳಿಂದ ಹದಗೆಟ್ಟಿದ್ದು ತಿರುವು ಮುರುವು ಮತ್ತು ಅಗಲ ಕಿರಿದಾಗಿದೆ. ದಿನಂಪ್ರತಿ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತದೆ. ರಸ್ತೆ ಅಭಿವೃದ್ದಿ ಮಾಡಿ ಎಂದು ಈ ಭಾಗದ ನಾಗರಿಕರು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಜನರ ಬೇಡಿಕೆ ಈ ಬಾರಿ ಈಡೇರಲಿದೆ.


ರಸ್ತೆ ಅಭಿವೃದ್ದಿಗೆ 25 ಕೋಟಿ
ಈ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸಲು ಈಗಾಗಲೇ 25 ಕೋಟಿ ಅನುದಾನ ಮಂಜೂರಾಗಿದೆ. ರಸ್ತೆ ಅಭಿವೃದ್ದಿಯಾಗುವಲ್ಲಿ ಅಗಲ ಕಿರಿದಾದ ರಸ್ತೆಯನ್ನು ಮೊದಲು ಅಭಿವೃದ್ದಿ ಮಾಡಬೇಕಿದೆ ಎಂಬ ಉದ್ದೇಶದಿಂದ ಶಾಸಕರು ಇತ್ತೀಚೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಪುತ್ತೂರಿಗೆ ಬಂದಾಗ ರಸ್ತೆ ಮತ್ತು ಸೇತುವೆ ವೀಕ್ಷಣೆ ಮಾಡಿದ್ದರು. ರಸ್ತೆ ವೀಕ್ಷಣೆ ಮಾಡಿದ್ದ ಸಚಿವರು ಅನುದಾನದ ಭರವಸೆಯನ್ನು ನೀಡಿದ್ದರು.
5 ನಿಮಿಷದಲ್ಲಿ ಕಬಕದಿಂದ ವಿಟ್ಲಕ್ಕೆ
ಈ ರಸ್ತೆ ಚತುಷ್ಪಥವಾಗಿ ಅಭಿವೃದ್ದಿ ಹೊಂದಿದ ಬಳಿಕ ಕಬಕದಿಂದ ವಿಟ್ಲಕ್ಕೆ ಕೇವಲ 5 ನಿಮಿಷದಲ್ಲಿ ಕ್ರಯಿಸಲಿದೆ ಎಂಬ ಲೆಕ್ಕಾಚಾರವೂ ಇದೆ. ಅಗಲೀಕರಣದ ವೇಳೆ ಎಲ್ಲಾ ತಿರುವುಗಳು ತೆರವಾಗಲಿದೆ. ಸೇತುವೆಗಳು ಕೂಡಾ ಅಭಿವೃದ್ದಿ ಹೊಂದಲಿರುವ ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯೂ ಇದೆ.
ಬಾಕ್ಸ್…
ಕಬಕದಿಂದ ವಿಟ್ಲಕ್ಕೆ ತೆರಳುವ ರಾಜ್ಯ ಹೆದ್ದಾರಿಯನ್ನು ಚತುಷ್ಫಥ ರಸ್ತೆಯನ್ನಾಗಿ ಮಾಡಬೇಕು ಎಂಬ ನನ್ನಬಯಕೆ ಈಡೇರಿದೆ. ಅದೆಷ್ಟೋ ವರ್ಷಗಳಿಂದ ಈ ಭಾಗದಲ್ಲಿ ಸಂಚರಿಸುವ ವಾಹನ ಚಾಲಕರು ಬಹಳ ಕಷ್ಟದಿಂದ ಈ ರಸ್ತೆಯಲ್ಲಿ ತೆರಳುತ್ತಿದ್ದರು. ವಾಹನ ದಟ್ಟನೆ ಇದ್ದರೂ ಅಗಲ ಕಿರಿದಾದ ಎರಡು ಸೇತುವೆಗಳು ಸುಗಮ ಸಂಚಾರಕ್ಕೂ ಅಡಚಣೆಯಾಗಿತ್ತು. ಸೇತುವೆ ಅಭಿವೃದ್ದಿಗೆ 10 ಕೋಟಿ ಮಂಜೂರಾಗಿದೆ.ರಸ್ತೆಗೆ ಈಗಾಗಲೇ 25 ಕೋಟಿ ಮಂಜೂರಾಗಿದೆ. ಒಟ್ಟು 45ರಿಂದ 50 ಕೋಟಿ ಅನುದಾನದಲ್ಲಿ ಹೊಸ ರಸ್ತೆ ನಿರ್ಮಾಣವಾಗಲಿದೆ.
