2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಟಾಲಿನ್​ ನೇತೃತ್ವದ ಡಿಎಂಕೆ ಪಕ್ಷ ಹೀನಾಯವಾಗಿ ಸೋತಿದೆ. ಆದರೂ ಕೂಡ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕನಾದ ಉದಯನಿಧಿ ಸ್ಟಾಲಿನ್​ ಮಾತ್ರ ಸನಾತನ ಧರ್ಮದ ವಿರುದ್ಧ ದ್ವೇಷ ಭಾಷಣವನ್ನು ಮಾತ್ರ ನಿಲ್ಲಿಸುತ್ತಿಲ್ಲ.! ಅದರಂತೆ, ನಟ ವಿಜಯ್ ನೇತೃತ್ವದ ಹೊಸ ಸರ್ಕಾರದ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕನಾಗಿ ಪದಾರ್ಪಣೆ ಮಾಡಿದ ಮೊದಲ ಭಾಷಣದಲ್ಲೇ ಉದಯನಿಧಿ, ‘ಸನಾತನ ನಿರ್ಮೂಲನೆ’ಯ ಮಂತ್ರ ಜಪಿಸುವ ಮೂಲಕ, ಮತ್ತೊಮ್ಮೆ ರಾಜಕೀಯ ಸಮರಕ್ಕೆ ನಾಂದಿ ಹಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು

ಹೊಸ ವಿಧಾನಸಭೆಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಉದಯನಿಧಿ ಸ್ಟಾಲಿನ್, “ಜನರ ನಡುವೆ ತಾರತಮ್ಯ ಮಾಡುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು” ಎಂದ ಅವರು, ದ್ರಾವಿಡ ಮುನ್ನೇತ್ರ ಕಳಗಂ (DMK) ಅಸ್ತಿತ್ವಕ್ಕೆ ಬಂದಿದ್ದೇ ಸನಾತನ ಧರ್ಮದ ವಿರುದ್ಧ ಹೋರಾಡಲು. ಈ ಹೋರಾಟವು ಗುರಿ ಮುಟ್ಟುವವರೆಗೆ ಮುಂದುವರಿಯುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಇನ್ನೂ, ಉದಯನಿಧಿ ಅವರ ಈ ಹೇಳಿಕೆಯು ಭಾರಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು, ಹಲವಾರು ಸಂಘಟನೆಗಳು ಮತ್ತು ಪಕ್ಷಗಳು ಇದನ್ನು ಧಾರ್ಮಿಕ ಭಾವನೆಗಳಿಗೆ ಮಾಡಿದ ಅವಮಾನ ಎಂದು ಕರೆದರೆ, ಅವರ ಬೆಂಬಲಿಗರು ಇದನ್ನು ಸಾಮಾಜಿಕ ಸಮಾನತೆ ಮತ್ತು ಜಾತಿ ತಾರತಮ್ಯದ ವಿರುದ್ಧದ ಹೇಳಿಕೆ ಎಂದು ಕರೆದಿದ್ದಾರೆ. ಇದರ ನಡುವೆ ಉದಯನಿಧಿ ಸ್ಟಾಲಿನ್​ ಅವರ ಈ ಹಿಂದಿನ ಹೇಳಿಕೆಯ ವೀಡಿಯೊ ಮತ್ತು ಸಂದರ್ಭವೂ ಮತ್ತೆ ಬೆಳಕಿಗೆ ಬಂದಿದೆ.