ನವದೆಹಲಿ: ಪಶ್ಚಿಮ ಏಷ್ಯಾದ ಉದ್ವಿಗ್ನತೆ, ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಹಾಗೂ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯ ಹಿನ್ನೆಲೆ ದೇಶದಲ್ಲಿ ಇಂಧನ ಉಳಿತಾಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಮಹತ್ವದ ಕ್ರಮ ಕೈಗೊಂಡಿದ್ದಾರೆ. ವಿಶೇಷ ಭದ್ರತಾ ಪಡೆ (SPG) ಬಳಸುವ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಶೇ.50ರಷ್ಟು ಕಡಿತಗೊಳಿಸಲು ಅವರು ಸೂಚನೆ ನೀಡಿದ್ದಾರೆ.

ಮಿತವ್ಯಯ ಕ್ರಮಗಳ ಭಾಗವಾಗಿ ಇತ್ತೀಚೆಗೆ ನಡೆದ ಗುಹಾವಾಟಿ ಹಾಗೂ ವಡೋದರಾ ಭೇಟಿಗಳಲ್ಲೂ ಕಡಿಮೆ ವಾಹನಗಳಲ್ಲಿಯೇ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಈ ಮೂಲಕ ಕೇವಲ ಸಾರ್ವಜನಿಕರಿಗೆ ಮಾತ್ರವಲ್ಲ, ಸರ್ಕಾರವೂ ಮಿತವ್ಯಯ ಕ್ರಮಗಳನ್ನು ಅನುಸರಿಸುತ್ತಿದೆ ಎಂಬ ಸಂದೇಶವನ್ನು ಪ್ರಧಾನಿ ನೀಡಿದ್ದಾರೆ.

ಇದಲ್ಲದೆ, ಪ್ರಧಾನಿ ಭದ್ರತೆಗಾಗಿ ಬಳಸುವ ಕೆಲವು ವಿಶೇಷ ಬೆಂಗಾವಲು ವಾಹನಗಳಲ್ಲಿ ಎಲೆಕ್ಟ್ರಿಕ್ ಕಾರುಗಳ (Electric Car) ಬಳಕೆಗೆ ಸಹ ಅನುಮತಿ ನೀಡಲಾಗಿದೆ. ಇಂಧನ ಬಳಕೆಯನ್ನು ಕಡಿಮೆ ಮಾಡುವ ಜೊತೆಗೆ ಪರಿಸರ ಸ್ನೇಹಿ ಕ್ರಮಗಳಿಗೂ ಸರ್ಕಾರ ಒತ್ತು ನೀಡುತ್ತಿದೆ.