


ನವದೆಹಲಿ: ದೇಶದ ಆರ್ಥಿಕ ಭದ್ರತೆಯನ್ನು ಗಟ್ಟಿಗೊಳಿಸಲು ಮತ್ತು ವಿದೇಶಗಳಿಗೆ ಹರಿದುಹೋಗುತ್ತಿರುವ ಲಕ್ಷಾಂತರ ಕೋಟಿ ರೂಪಾಯಿಗಳ ‘ಡಾಲರ್’ ಹೊರಹರಿವಿಗೆ ಬ್ರೇಕ್ ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರು ಈಗ ‘ಉಳಿತಾಯದ ಮಹಾ ಅಭಿಯಾನ’ಕ್ಕೆ ಕರೆ ನೀಡಿದ್ದಾರೆ.
ಪ್ರಸ್ತುತ ಜಾಗತಿಕ ಯುದ್ಧದ ವಾತಾವರಣದಲ್ಲಿ ರಸಗೊಬ್ಬರ ಮತ್ತು ಇಂಧನ ಬೆಲೆಗಳು ಗಗನಕ್ಕೇರಿದ್ದರೂ, ಸರ್ಕಾರವು ಆ ಹೊರೆಯನ್ನು ಹೊತ್ತು ಜನಸಾಮಾನ್ಯರಿಗೆ ಕಡಿಮೆ ಬೆಲೆಗೆ ನೀಡುತ್ತಿದೆ. ಈ ಬಿಕ್ಕಟ್ಟಿನಿಂದ ದೇಶವನ್ನು ರಕ್ಷಿಸಲು ಪ್ರತಿಯೊಬ್ಬ ನಾಗರಿಕನೂ ಉಳಿತಾಯದ ಮೂಲಕ ಸಹಕರಿಸಬೇಕು. ಸಾರ್ವಜನಿಕರು ತಮ್ಮ ಜೀವನಶೈಲಿಯಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಮೋದಿ ಅವರು ಮನವಿ ಮಾಡಿದ್ದಾರೆ.


ನಮೋ ಉಳಿತಾಯದ ಮಂತ್ರ
ಪೆಟ್ರೋಲ್ (Petrol) ಮತ್ತು ಡೀಸೆಲ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ಸಾರ್ವಜನಿಕ ಸಾರಿಗೆಯನ್ನು (ಬಸ್, ಮೆಟ್ರೋ) ಹೆಚ್ಚಾಗಿ ಬಳಸಿ ಮತ್ತು ಸಾಧ್ಯವಿರುವ ಕಡೆ ವರ್ಕ್ ಫ್ರಮ್ ಹೋಮ್ (WFH) ಮಾದರಿಯನ್ನು ಅನುಸರಿಸಿ. ಅನಗತ್ಯವಾಗಿ ಚಿನ್ನ (Gold) ಖರೀದಿ ಮಾಡುವುದನ್ನು ತಪ್ಪಿಸಿ. ಇದು ದೇಶದ ಅತಿ ದೊಡ್ಡ ಆಮದು ವೆಚ್ಚಗಳಲ್ಲಿ ಒಂದಾಗಿದೆ.ವಿದೇಶದಿಂದ ಆಮದಾಗುವ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿ, ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡಿ. ಅಡುಗೆ ಎಣ್ಣೆಯ ಬಳಕೆಯನ್ನು ಮಿತಗೊಳಿಸಿ ಆರೋಗ್ಯ ಕಾಪಾಡಿಕೊಳ್ಳಿ ಹಾಗೂ ಕೃಷಿಯಲ್ಲಿ ರಾಸಾಯನಿಕ ಗೊಬ್ಬರದ ಬದಲು ಸಾವಯವ ಗೊಬ್ಬರಕ್ಕೆ ಹೆಚ್ಚಿನ ಒತ್ತು ನೀಡಿ.
ದೇಶಕ್ಕಾಗುವ ಲಾಭ ಎಷ್ಟು?
ಈ ಮಹಾ ಅಭಿಯಾನದ ಹಿಂದೆ ಸುಮಾರು 23 ಲಕ್ಷ ಕೋಟಿ ರೂಪಾಯಿಗಳ ಬೃಹತ್ ವೆಚ್ಚವನ್ನು ತಗ್ಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಭಾರತದ ಒಟ್ಟು ಆಮದು ವೆಚ್ಚದಲ್ಲಿ ಚಿನ್ನದ ಪಾಲು ಶೇ. 10ರಷ್ಟಿದೆ. ಚೀನಾದ ನಂತರ ವಿಶ್ವದಲ್ಲಿ ಅತಿ ಹೆಚ್ಚು ಚಿನ್ನವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. 2026ರ ಅಂದಾಜಿನ ಪ್ರಕಾರ, ಭಾರತವು ಸುಮಾರು 6.76 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ. ಜನರು ಚಿನ್ನದ ಖರೀದಿಯನ್ನು ಕಡಿಮೆ ಮಾಡಿದರೆ, ದೇಶಕ್ಕೆ ವಾರ್ಷಿಕ 2 ರಿಂದ 3 ಲಕ್ಷ ಕೋಟಿ ರೂ. ಉಳಿತಾಯವಾಗಲಿದೆ. ಇದರಿಂದ ಡಾಲರ್ ಹೊರಹರಿವು ಗಣನೀಯವಾಗಿ ತಗ್ಗುತ್ತದೆ.
ಸದ್ಯ ಭಾರತವು ವಾರ್ಷಿಕ 17 ಲಕ್ಷ ಕೋಟಿ ರೂ. ಮೌಲ್ಯದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧಗಳ ಕಾರಣದಿಂದ ತೈಲ ಬೆಲೆ ಗಗನಕ್ಕೇರಿದೆ. ಇಂಧನ ಬಳಕೆ ಕಡಿಮೆ ಮಾಡುವುದರಿಂದ ಈ ಆಮದು ಹೊರೆಯನ್ನು ತಗ್ಗಿಸಿ, ವಿದೇಶಿ ವಿನಿಮಯವನ್ನು ಉಳಿಸಬಹುದು.
2026ರಲ್ಲಿ ಭಾರತವು 1.83 ಲಕ್ಷ ಕೋಟಿ ರೂ. ಮೌಲ್ಯದ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುವ ನಿರೀಕ್ಷೆಯಿದೆ. ಇದರ ಬಳಕೆಗೆ ಕತ್ತರಿ ಹಾಕುವುದರಿಂದ ಆರ್ಥಿಕ ಲಾಭದ ಜೊತೆಗೆ ಆರೋಗ್ಯವೂ ವೃದ್ಧಿಸುತ್ತದೆ. ಈ ವರ್ಷ ಸುಮಾರು 1.34 ಲಕ್ಷ ಕೋಟಿ ರೂ. ಮೌಲ್ಯದ ರಸಗೊಬ್ಬರ ಆಮದಾಗುತ್ತಿದೆ. ಸಾವಯವ ಕೃಷಿಗೆ ಒತ್ತು ನೀಡಿದರೆ ಈ ಬೃಹತ್ ಮೊತ್ತ ದೇಶದ ಬೊಕ್ಕಸದಲ್ಲೇ ಉಳಿಯಲಿದೆ.
