


ಸುಳ್ಯದ ತೊಡಿಕಾನ ಗ್ರಾಮದಲ್ಲಿ 2 BSNL ಟವರ್ ಗಳಿದ್ದರೂ ಸಹ 2ಜಿ, 3ಜಿ ನೆಟ್ವರ್ಕ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಇದರಿಂದಾಗಿ ಗ್ರಾಮದಲ್ಲಿನ ಜನರು ನೆಟ್ ವರ್ಕ್ ಸಿಗದೆ ಪರದಾಡುವಂತಾಗಿದೆ. ಸುಮಾರು 1 ತಿಂಗಳಿನಿಂದ ಗ್ರಾಮದಲ್ಲಿ ನೆಟ್ ವರ್ಕ್ ಸಮಸ್ಯೆ ನಿರಂತರವಾಗಿದ್ದು, ನಾಟ್ ರೀಚಬಲ್ ಸಮಸ್ಯೆಯಿಂದಾಗಿ ಅಗತ್ಯ ಕೆಲಸಗಳಿಗೆ ಕರೆ ಮಾಡಲು ನೆಟ್‌ವರ್ಕ್ ಹುಡುಕಿ ಹೊರಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
BSNL ಟವರ್ ಇದ್ದರೂ ನೆಟ್ ವರ್ಕ್ ಸಿಗದೆ ಪರದಾಟ
ತೊಡಿಕಾನದಲ್ಲಿರುವ ಬಿಎಸ್‌ಎನ್‌ಎಲ್ ಮೊಬೈಲ್ ಟವರ್‌ನಿಂದ 2ಜಿ, 3ಜಿ ನೆಟ್ವರ್ಕ್ ಸಂಪರ್ಕ ಕಡಿತಗೊಂಡಿರುವುದರಿಂದ ಗ್ರಾಮೀಣ ಪ್ರದೇಶದ ಜನರು ತೊಂದರೆಗೆ ಸಿಲುಕಿದ್ದಾರೆ. ಅಗತ್ಯ ಕೆಲಸ ಕಾರ್ಯಗಳಿಗೆ ಮೊಬೈಲ್ ನೆಟ್‌ವರ್ಕ್ ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ತೊಡಿಕಾನ ಗ್ರಾಮದ ಅಡ್ಯಡ್ಕ ಮತ್ತು ತೊಡಿಕಾನದಲ್ಲಿ ಎರಡು ಮೊಬೈಲ್ ಟವರ್‌ಗಳಿವೆ. ಗ್ರಾಮಸ್ಥರ ಬೇಡಿಕೆಯಂತೆ ಅಡ್ಯಡ್ಕದಲ್ಲಿ ಬಿಎಸ್‌ಎನ್‌ಎಲ್ ಟವರ್ ನಿರ್ಮಾಣವಾಗಿತ್ತು. ಏರ್‌ಟೆಲ್ ಕೂಡ ಇದೇ ಟವರ್ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಏರ್‌ಟೆಲ್ ನೆಟ್‌ವರ್ಕ್ ಸಮಸ್ಯೆ ಇಲ್ಲದಿದ್ದರೂ ಬಿಎಸ್‌ಎನ್‌ಎಲ್ ಮಾತ್ರ ಸಂಪೂರ್ಣ ಕಾರ್ಯ ನಿಲ್ಲಿಸಿದೆ.
ತೊಡಿಕಾನದಲ್ಲಿ ಬಿಎಸ್‌ಎನ್‌ಎಲ್ ಟವರ್ ಮಾತ್ರ ಇದ್ದು, ಇದರ ಮೂಲಕ ಈ ಹಿಂದೆ 2ಜಿ, 3ಜಿ ಸಂಪರ್ಕ ಸಿಗುತ್ತಿತ್ತು. ಕರೆಂಟ್ ಕೈ ಕೊಟ್ಟರೆ ಹಾಗೂ ಜನರೇಟರ್‌ಗೆ ಡೀಸೆಲ್ ಸಮಸ್ಯೆ ಕಂಡು ಬಂದರೆ ಮಾತ್ರ ಈ ಹಿಂದೆ ನೆಟ್‌ವರ್ಕ್ ಸಮಸ್ಯೆಯಾಗುತ್ತಿತ್ತು. ಈಗ ಟವರ್‌ನ ಸಂಪರ್ಕವನ್ನು 4ಜಿ, 5ಜಿಗೆ ಏರಿಸಿದ್ದು, ಬಳಿಕ ನಿರಂತರವಾಗಿ ಇಲ್ಲಿ ನೆಟ್‌ವರ್ಕ್ ಸಮಸ್ಯೆ ಕಂಡು ಬಂದಿದೆ.
ಪ್ರಸ್ತುತ 5ಜಿ ಹೊಂದಿದ ಮೊಬೈಲ್ ಸೆಟ್‌ಗೆ ಮಾತ್ರ ನೆಟ್‌ವರ್ಕ್ ಸಿಗುತ್ತಿರುವುದರಿಂದ ಜನ ಸಾಮಾನ್ಯರಿಗೆ ಸಮಸ್ಯೆಯಾಗಿದೆ. 2ಜಿ, 3ಜಿ ಸಂಪರ್ಕ ಇಲ್ಲದೆ ಇರುವುದರಿಂದ ಮೊಬೈಲ್‌ಗೆ ಕರೆ ಮಾಡಿದಾಗ ನಾಟ್ ರೀಚೆಬಲ್ ಬರುತ್ತಿದೆ. ಇದರಿಂದ ಬ್ಯಾಂಕ್, ದೇವಸ್ಥಾನ, ಶಾಲೆ, ಅಂಚೆ ಕಚೇರಿ, ವರ್ಕ್ ಪ್ರಮ್ ಹೋಂ ಮುಂತಾದ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗಿದೆ. ನೆಟ್‌ವರ್ಕ್ ಸಮಸ್ಯೆ ಕುರಿತು ಬಿಎಸ್‌ಎನ್‌ಎಲ್ ಹಿರಿಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೆ ಕೇವಲ ಭರವಸೆ ಮಾತ್ರ ಸಿಗುತ್ತಿದ್ದರೂ ಈವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಅಳಲು.
