


ಪಶ್ಚಿಮ ಬಂಗಾಳ ರಾಜಕೀಯದಲ್ಲಿ ದೊಡ್ಡ ಗೊಂದಲದ ಪರಿಸ್ಥಿತಿ ಸೃಷ್ಟಿಯಾಗಿದೆ. ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲು ಕಂಡ ನಂತರವೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಸಾಮಾನ್ಯವಾಗಿ ಚುನಾವಣೆಯಲ್ಲಿ ಸೋತ ನಂತರ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ, ಹೊಸ ಸರ್ಕಾರ ಬರುವವರೆಗೂ ಉಸ್ತುವಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುವುದು ಪ್ರಜಾಪ್ರಭುತ್ವದ ಪದ್ಧತಿ.
ಆದರೆ ಮಮತಾ ಬ್ಯಾನರ್ಜಿ ‘ಇದು ಜನಾದೇಶವಲ್ಲ, ನನ್ನ ವಿರುದ್ಧ ನಡೆದ ಪಿತೂರಿ’ ಎಂದು ಹೇಳಿ, ತಮ್ಮ ಸ್ಥಾನದಿಂದ ಹಿಂದೆ ಸರಿಯುವುದಿಲ್ಲವೆಂದು ಘೋಷಿಸಿದ್ದಾರೆ. ಹಾಗಾದ್ರೆ ಮಮತಾ ರಾಜೀನಾಮೆ ನೀಡದಿದ್ದರೆ ಬಿಜೆಪಿ ಸರ್ಕಾರ ರಚಿಸುವುದು ಹೇಗೆ? ನೋಡಿ.


ರಾಜೀನಾಮೆ ಕೊಡಲ್ಲ ಎಂದ ಮಮತಾ ಬ್ಯಾನರ್ಜಿ!
ಮಮತಾ ಬ್ಯಾನರ್ಜಿ ಅವರ ಈ ನಿರ್ಧಾರದಿಂದ ಬಂಗಾಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟಿನ ಭೀತಿ ಉಂಟಾಗಿದೆ. ಸಂವಿಧಾನದ 172ನೇ ವಿಧಿಯ ಪ್ರಕಾರ ಯಾವುದೇ ವಿಧಾನಸಭೆಯ ಅವಧಿ 5 ವರ್ಷಕ್ಕಿಂತ ಹೆಚ್ಚು ಇರಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದ ವಿಧಾನಸಭೆಯ ಪ್ರಸ್ತುತ ಅವಧಿ ಇಂದು ಮಧ್ಯರಾತ್ರಿ 12:01ಕ್ಕೆ ಮುಗಿಯುತ್ತಿದೆ. ಈ ಸಮಯದ ನಂತರ ಮಮತಾ ಕಾನೂನುಬದ್ಧವಾಗಿ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವಕಾಶವಿಲ್ಲ. ಸಂವಿಧಾನ ತಜ್ಞರ ಪ್ರಕಾರ, 164ನೇ ವಿಧಿಯನ್ವಯ ಮುಖ್ಯಮಂತ್ರಿಗಳು ‘ರಾಜ್ಯಪಾಲರ ಸಂತೋಷದ ಅವಧಿ’ವರೆಗೆ ಮಾತ್ರ ಹುದ್ದೆಯಲ್ಲಿ ಇರುತ್ತಾರೆ. ಅವಧಿ ಮುಗಿದ ನಂತರ, ಅಥವಾ ಬಹುಮತ ಕಳೆದುಕೊಂಡ ನಂತರ, ರಾಜ್ಯಪಾಲರಿಗೆ ಅವರನ್ನು ವಜಾಗೊಳಿಸುವ ಅಧಿಕಾರ ಇದೆ.
ಒಂದು ದಿನದ ರಾಷ್ಟ್ರಪತಿ ಆಳ್ವಿಕೆ ಜಾರಿ?
ಇಂತಹ ಸಂದರ್ಭದಲ್ಲಿ, ಒಂದು ದಿನದ ರಾಷ್ಟ್ರಪತಿ ಆಳ್ವಿಕೆಯ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾನೂನು ತಜ್ಞರ ಪ್ರಕಾರ, ಮುಖ್ಯಮಂತ್ರಿಯಾಗಿ ಮುಂದುವರಿಯಲು ಅಥವಾ ‘ಹಂಗಾಮಿ’ ಮುಖ್ಯಮಂತ್ರಿಯಾಗಲು, ಮೊದಲು ಅವರು ರಾಜೀನಾಮೆ ಸಲ್ಲಿಸಬೇಕು. ರಾಜೀನಾಮೆ ಸ್ವೀಕರಿಸದೇ ಇದ್ದರೆ, ಅವರನ್ನು ಹಂಗಾಮಿ ಮುಖ್ಯಮಂತ್ರಿಯಾಗಿ ನೇಮಿಸುವ ಅವಕಾಶವಿಲ್ಲ. ಹಿರಿಯ ವಕೀಲ ಹರೀಶ್ ಸಾಳ್ವೆ ಅವರ ಅಭಿಪ್ರಾಯದಂತೆ, ಇಂದು ರಾತ್ರಿ ಒಳಗೆ ಮಮತಾ ಅವರ ರಾಜೀನಾಮೆ ಸ್ವೀಕರಿಸದಿದ್ದರೆ, ರಾಜ್ಯಪಾಲರು ಬಂಗಾಳದಲ್ಲಿ ಅಲ್ಪಾವಧಿಗೆ ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸು ಮಾಡಬಹುದು. ಇದು ಸುಮಾರು 24 ಗಂಟೆಗಳಷ್ಟೇ ಇರಬಹುದು. ಕಾರಣ, BJP ತನ್ನ ಸರ್ಕಾರದ ಪ್ರಮಾಣವಚನನ್ನು May 9ರಂದು ನಡೆಸಲು ತೀರ್ಮಾನಿಸಿದೆ. May 8ರಂದು ರಾಜ್ಯದಲ್ಲಿ ‘ಯಾರೂ ಸರ್ಕಾರದಲ್ಲಿಲ್ಲ’ ಎಂಬ ಸ್ಥಿತಿ ಬಾರದಂತೆ ಈ ಅವಧಿಯನ್ನು ರಾಷ್ಟ್ರಪತಿ ಆಳ್ವಿಕೆಯ ಅಡಿಯಲ್ಲಿ ಕಾನೂನುಬದ್ಧವಾಗಿ ಮುಚ್ಚಿಕೊಳಲಾಗಬಹುದು.
