ಮಂಡ್ಯ: ದೇಶದಲ್ಲಿ ಬಿರು ಬಿಸಿಲಿಗೆ ಜನ ಹೈರಾಣಾಗಿದ್ದು, ಎಳನೀರಿಗೆ ಮೊರೆ ಹೋಗ್ತಿದ್ದಾರೆ‌. ಹೀಗಾಗೆ ಏಷ್ಯಾದಲ್ಲಿಯೇ ಅತಿ ದೊಡ್ಡ ಎಳನೀರು ಮಾರುಕಟ್ಟೆಯಾಗಿರುವ ಮದ್ದೂರು ಎಳನೀರು ಮಾರುಕಟ್ಟೆಯ ಎಳನೀರಿಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ. ಅದ್ರಲ್ಲೂ ಉತ್ತರ ಭಾರತದಲ್ಲಂತೂ ಮದ್ದೂರು ಮಾಲ್ ಅಂತಲೇ ಪ್ರಖ್ಯಾತಿ ಪಡೆದಿದ್ದು, ಈ ಮದ್ದೂರು ಮಾಲ್ಗೆ ಎಲ್ಲಿಲ್ಲದ ಬೇಡಿಕೆ ಇದೆ.

ದಕ್ಷಿಣದಿಂದ ಉತ್ತರದ ತುತ್ತತುದಿವರೆಗೆ!

ಹೌದು‌‌, ಏಷ್ಯಾದಲ್ಲಿಯೇ ಅತಿ ದೊಡ್ಡ ಎಳನೀರು ಮಾರುಕಟ್ಟೆಯೆಂದೇ ಹೆಸರಾಗಿರುವ ಮಂಡ್ಯ ಜಿಲ್ಲೆಯ ಮದ್ದೂರಿನ ಎಳನೀರು ಎಪಿಎಂಸಿ ಮಾರುಕಟ್ಟೆಯಲ್ಲಿ ಎಳನೀರು ಉತ್ತರ ಭಾರತದಲ್ಲಿ ಹೆಸರುವಾಸಿಯಾಗಿದೆ. ಇಲ್ಲಿನ ಎಳನೀರು ಪ್ರಮುಖವಾಗಿ ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಆಂಧ್ರ ಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ತಮಿಳುನಾಡು ಸೇರಿ ಹಲವಾರು ರಾಜ್ಯಗಳಿಗೆ ಪೂರೈಕೆಯಾಗ್ತಿದೆ. ಈ ರಾಜ್ಯಗಳಲ್ಲಿ ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಅದರಲ್ಲೂ ಮದ್ದೂರು ಎಳನೀರಿಗೆ ಬಾರಿ ಡಿಮ್ಯಾಂಡ್ ಉಂಟಾಗಿದೆ. ಪ್ರತಿ ವರ್ಷ ಹೊರ ರಾಜ್ಯಗಳಿಂದಲೇ ಬಾರಿ ವಹಿವಾಟು ನಡೆಯುತ್ತಿದ್ದು, ಕೋಟ್ಯಾಂತರ ರೂ. ವ್ಯಾಪಾರ ನಡೆಯಲಿದೆ.