


ಚಿಕ್ಕಮಗಳೂರಿನ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವೇಳೆ, ಸ್ಟ್ರಾಂಗ್ ರೂಮ್‌ನ ಟ್ರಂಕ್‌ಗಳು ತೆರೆದಿವೆ ಎಂಬ ಗೊಂದಲದಿಂದ ಹೈಡ್ರಾಮಾ ಸೃಷ್ಟಿಯಾಯಿತು. ತಕ್ಷಣದ ಪರಿಶೀಲನೆ ನಡೆಸಿದ ಅಧಿಕಾರಿಗಳು, ಅಂಚೆ ಮತಪತ್ರಗಳಿದ್ದ ಟ್ರಂಕ್‌ಗಳು ಸುರಕ್ಷಿತವಾಗಿದ್ದು, ಸೀಲ್ ಹಾಗೆಯೇ ಇದೆ ಎಂದು ಸ್ಪಷ್ಟಪಡಿಸಿ ಗೊಂದಲಕ್ಕೆ ತೆರೆ ಎಳೆದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ವೇಳೆ ಹೈಡ್ರಾಮಾ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಐಡಿಎಸ್‌ಜಿ ಕಾಲೇಜು ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆ ಮರು ಎಣಿಕೆ ಕಾರ್ಯ ನಡೆಯುತ್ತಿರುವಾಗ, ಸ್ಟ್ರಾಂಗ್ ರೂಮ್‌ನಲ್ಲಿ ಸಂಗ್ರಹಿಸಿದ್ದ ಟ್ರಂಕ್‌ಗಳು ಓಪನ್ ಆಗಿದ್ದಾರೆಯೆಂಬ ಗೊಂದಲ ಮೂಡಿತು.


ಈ ಗೊಂದಲದ ಹಿನ್ನೆಲೆ ಚುನಾವಣಾಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡು ಒಟ್ಟು 20 ಟ್ರಂಕ್‌ಗಳ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಕೆಲವು ಟ್ರಂಕ್‌ಗಳು ಜಖಂಗೊಂಡಿರುವುದು ಪತ್ತೆಯಾದರೂ, ಅವುಗಳಲ್ಲಿ ಅಂಚೆ ಮತಪತ್ರಗಳಿಲ್ಲದೆ, ಚುನಾವಣೆಗೆ ಸಂಬಂಧಿಸಿದ ಇತರೆ ದಾಖಲೆ ಪತ್ರಗಳೇ ಇರುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದರು.
ಸೀಲ್ ಇಲ್ಲದ ಟ್ರಂಕ್‌ಗಳ ಬಗ್ಗೆ ಅನುಮಾನ
ಮುಖ್ಯವಾಗಿ, ಅಂಚೆ ಮತಪತ್ರಗಳನ್ನು ಹೊಂದಿದ್ದ ಟ್ರಂಕ್‌ಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಅವುಗಳ ಸೀಲ್‌ಗಳು ಅಚಲವಾಗಿವೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಅಭ್ಯರ್ಥಿಗಳ ಸಮ್ಮುಖದಲ್ಲೇ ದೃಢಪಡಿಸಿದರು. ಸೀಲ್ ಇಲ್ಲದ ಟ್ರಂಕ್‌ಗಳ ಕುರಿತು ಉಂಟಾದ ಅನುಮಾನಗಳನ್ನು ದೂರ ಮಾಡಿ, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟನೆ ನೀಡಿದರು.
