ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿರುವಂತೆಯೇ, ರಾಜ್ಯದ ಹೈ-ವೋಲೈಜ್ ಕ್ಷೇತ್ರ ಎಂದೇ ಗುರುತಿಸಲ್ಪಡುವ ಮಂಜೇಶ್ವರದಲ್ಲಿ ಹೊಸ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಪ್ರಬಲ ತ್ರಿಕೋನ ಸ್ಪರ್ಧೆಯ ನಡುವೆಯೇ, ಮಂಜೇಶ್ವರ ಪಂಚಾಯತ್ ಮಾಜಿ ಅಧ್ಯಕ್ಷೆ ಜೀನ್ ಲವಿನಾ ಮಾಂತೆರೋ ಅವರು ಅಂತಿಮ ಕ್ಷಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವುದು ಪ್ರಮುಖ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ.

ಕಳೆದ ಹಲವು ಚುನಾವಣೆಗಳಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಮೈದೂರ ಹೋಗುತ್ತಿರುವ ಮಂಜೇಶ್ವರ ಕ್ಷೇತ್ರವನ್ನು ಈ ಬಾರಿ ಹೇಗಾದರೂ ಮಾಡಿ ವಶಪಡಿಸಿಕೊಳ್ಳಬೇಕೆಂದು ಹವಣಿಸುತ್ತಿರುವ ಬಿಜೆಪಿಗೆ ಈ ಬೆಳವಣಿಗೆ ವರದಾನವಾಗುವ ಸಾಧ್ಯತೆಯಿದೆ. ಇನ್ನೊಂದೆಡೆ, ಸಾಂಪ್ರದಾಯಿಕ ಮತಬ್ಯಾಂಕ್‌ಗೆ ಕತ್ತರಿ ಬೀಳುವ ಭೀತಿಯಲ್ಲಿ ಯುಡಿಎಫ್ ಪಾಳೆಯದಲ್ಲಿ ನಡುಕ ಶುರುವಾಗಿದೆ. ಮಂಜೇಶ್ವರ ಕ್ಷೇತ್ರದಲ್ಲಿ ಸರಿ ಸುಮಾರು 7,000 ಕ್ರಿಶ್ಚಿಯನ್ ಮತದಾರರಿದ್ದಾರೆ. ಜೀನ್ ಲವಿನಾ ಮೊಂತೇರೋ ಅವರು ಈ ಸಮುದಾಯದ ಪ್ರಬಲ ನಾಯಕಿಯಾಗಿರುವುದರಿಂದ, ಅವರ ಸ್ಪರ್ಧೆಯು ಸಮುದಾಯದ ಮತಗಳನ್ನು ಯಾವ ಕಡೆಗೆ ತಿರುಗಿಸಲಿದೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.