ರಾಜ್ಯದ ಪ್ರತಿಯೊಬ್ಬ ನಾಗರಿಕನ ಮೇಲಿನ ತಲಾ ಸಾಲದ ಹೊರೆ ರೂ.83,146
ಸಾಲ ಮಾಡಿ ಜನರ ಮೇಲೆ ಹೊರಿಸಿದ್ದೆ ಸರ್ಕಾರದ ಸಾಧನೆ :ಶಾಸಕ ಕಿಶೋರ್ ಕುಮಾರ್ ಪುತ್ತೂರು

ಪುತ್ತೂರು: ರಾಜ್ಯ ಸರಕಾರವು ಸಾಲದ ಸುಳಿಯಲ್ಲಿ ಮುಳುಗಿದ್ದು, 2026ರ ಫೆಬ್ರವರಿವರೆಗೆ ರಾಜ್ಯ ಸರ್ಕಾರದ ಬಾಕಿ ಉಳಿದಿರುವ ಒಟ್ಟು ಸಾರ್ವಜನಿಕ ಸಾಲದ ಮೊತ್ತ ರೂ.5,71,921 ಕೋಟಿಗಳು ಮತ್ತು ರಾಜ್ಯದ ಪ್ರತಿಯೊಬ್ಬ ನಾಗರಿಕನ ಮೇಲಿನ ತಲಾ ಸಾಲದ ಹೊರೆ ರೂ.83,146ಗಳಾಗಿವೆ.
ಇತ್ತೀಚೆಗೆ ನಡೆದ ಬಜೆಟ್ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಆರ್ಥಿಕ ಇಲಾಖೆಗೆ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಯವರು ನೀಡಿದ ಉತ್ತರದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.
ರಾಜ್ಯ ಸರ್ಕಾರ 2023-24ರಲ್ಲಿ ರೂ.90,280 ಕೋಟಿ ಮತ್ತು 2024-25ರಲ್ಲಿ ರೂ.1,03,342 ಕೋಟಿ ಸಾಲ ಪಡೆದಿದ್ದು, ಕೇವಲ ಎರಡು ವರ್ಷಗಳಲ್ಲಿ ಈ ಮೊತ್ತ ರೂ.1,93,622 ಕೋಟಿಯಷ್ಟಾಗಿದೆ. ರಾಜ್ಯ ಸರ್ಕಾರ ಪಡೆದ ಸಾಲದ ಬಡ್ಡಿ ಪಾವತಿಸಲು 2023-24ರಲ್ಲಿ ರೂ.27,232 ಕೋಟಿ ಮತ್ತು 2024-25ರಲ್ಲಿ ರೂ.32,347 ಕೋಟಿ ಸೇರಿದಂತೆ ಒಟ್ಟು ರೂ.59,579 ಕೋಟಿ ವೆಚ್ಚ ಮಾಡಿದೆ.

ಹಣಕಾಸು ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣಾ ನಿಯಮಗಳ ಮಿತಿಯನ್ನು ಸರ್ಕಾರವು ಪಾಲಿಸುತ್ತಿದೆಯೇ ಎಂಬುದನ್ನು ಶಾಸಕರು ಕೇಳಿದ್ದು, ರಾಜ್ಯದ ವಿತ್ತೀಯ ಕೊರತೆ ಮತ್ತು ಹೊಣೆಗಾರಿಕೆಯನ್ನು ಸದರಿ ನಿಯಮಗಳಂತೆ ಪಾಲನೆ ಮಾಡಲಾಗುತ್ತಿದೆ ಎಂಬುದಾಗಿ ಉತ್ತರಿಸಿದ್ದಾರೆ

ಕೇಂದ್ರ ಸರಕಾರವು 15ನೇ ಹಣಕಾಸು ಆಯೋಗ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ಎಲ್ಲಾ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡುವಾಗ ಸದರಿ ಅನುದಾನದ ಬಳಕೆ ಮತ್ತು ಒಟ್ಟು ಹಂಚಿಕೆಯಾದ ಅನುದಾನ ಪಡೆಯಲು ಆಯೋಗದ ಶಿಫಾರಸು ಮತ್ತು ಕೆಲವು ಮಾನದಂಡದಡಿ ನಿರ್ದಿಷ್ಟ ಮಾರ್ಗಸೂಚಿಯನ್ನು ಹೊರಡಿಸುತ್ತದೆ. ಅದನ್ನು ಸರಿಯಾಗಿ ಪಾಲನೆ ಮಾಡಿದಲ್ಲಿ ಹಂಚಿಕೆಯಾದ ಸಂಪೂರ್ಣ ಅನುದಾನವನ್ನು ಪಡೆಯಬಹುದು ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರ ತನ್ನ ಬದ್ಧತೆ ಮತ್ತು ಹೊಣೆಗಾರಿಕೆ ಮರೆತಿದೆ. 15ನೇ ಹಣಕಾಸು ಆಯೋಗವು ರಾಜ್ಯಕ್ಕೆ ಹಂಚಿಕೆ ಮಾಡಿರುವ ಅನುದಾನ ಮತ್ತು ಕೇಂದ್ರ ಸರ್ಕಾರವು ಜಲ ಜೀವನ್ ಮಿಷನ್‍ನಡಿ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿರುವ ಅನುದಾನಕ್ಕೆ ಅಗತ್ಯ ಪ್ರಮಾಣ ಪತ್ರ ಸಲ್ಲಿಸದೆ ಸಂಪೂರ್ಣ ಅನುದಾನ ಪಡೆಯಲು ವಿಫಲವಾಗಿರುವ ರಾಜ್ಯ ಸರ್ಕಾರ ತನ್ನ ಬದ್ಧತೆ ಮತ್ತು ಹೊಣೆಗಾರಿಕೆಯನ್ನು ಮರೆತು ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ದೂರುವ ಹೊಣೆಗೇಡಿತನ ತೋರುತ್ತಿದೆ ಎಂದು ಕಿಶೋರ್ ಕುಮಾರ್ ಪುತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.