ಚಿಕ್ಕಮಗಳೂರು ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ಕರಡಿಯೊಂದು ಸತತವಾಗಿ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಭೀತಿ ಸೃಷ್ಟಿಸಿದೆ. ನಗರದ ಹೃದಯಭಾಗದಂತಿರುವ ಎಂ. ಜಿ. ರಸ್ತೆ, ಶಂಕರ್ ಪುರ ಬಡಾವಣೆ ಮತ್ತು ಬಸ್ ನಿಲ್ದಾಣದಂತಹ ಜನನಿಬಿಡ ಪ್ರದೇಶಗಳಲ್ಲಿ ಕರಡಿ ಸಂಚರಿಸಿರುವುದು ಜನರನ್ನು ಆತಂಕಕ್ಕೀಡುಮಾಡಿದೆ.

ಈ ವಿಷಯವು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲೂ ಸದ್ದು ಮಾಡಿದ್ದು, ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರ ಸಮ್ಮುಖದಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಗುರುವಾರ ನಗರದ ಹೊರವಲಯದ ಗವನಹಳ್ಳಿಯಲ್ಲಿ ಕಾಣಿಸಿಕೊಂಡಿದ್ದ ಕರಡಿ, ಇದೀಗ ನಗರಸಭೆಯ ಡಂಪಿಂಗ್ ಯಾರ್ಡ್ ಆವರಣದಲ್ಲಿ ಓಡಾಟ ನಡೆಸುತ್ತಿರುವುದು ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅರಣ್ಯ ಇಲಾಖೆಯು ಕರಡಿಯನ್ನು ಸೆರೆಹಿಡಿದು ಕಾಡಿಗೆ ಬಿಡಲು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ನಗರವಾಸಿಗಳು ಒತ್ತಾಯಿಸುತ್ತಿದ್ದಾರೆ.