


ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಯೋಜನಾ ಪ್ರಾಧಿಕಾರಗಳಲ್ಲಿ ಹುದ್ದೆಗಳು ಖಾಲಿ ಬಿದ್ದಿರುವ ಹಿನ್ನಲೆಯಲ್ಲಿ ಗ್ರಾಮೀಣ ಭಾಗದಲ್ಲಿ ವಸತಿ, ವಾಣಿಜ್ಯ ಮತ್ತು ಇತರ ಉದ್ದೇಶದ ನಿವೇಶನಗಳಿಗೆ ವಿನ್ಯಾಸ ಅನುಮೋದನೆ ಮತ್ತು ಕಟ್ಟಡ ನಕ್ಷೆಗೆ ತಾಂತ್ರಿಕ ಅನುಮೋದನೆ ನೀಡುವಲ್ಲಿ ವಿಳಂಬವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅನುಮೋದನೆ ಪ್ರಕ್ರಿಯೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಆಗ್ರಹಿಸಿದ್ದಾರೆ.
ಇತ್ತೀಚಿಗೆ ನಡೆದ ವಿಧಾನ ಪರಿಷತ್ತಿನ ಬಜೆಟ್ ಅಧಿವೇಶನದಲ್ಲಿ ಕಿಶೋರ್ ಕುಮಾರ್ ಪುತ್ತೂರು ಅವರು ಈ ಬಗ್ಗೆ ನಗರಾಭಿವೃದ್ದಿ ಸಚಿವರಿಗೆ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವರು ನೀಡಿದ ಉತ್ತರದಲ್ಲಿ ಸದರಿ ಮಾಹಿತಿ ತಿಳಿದು ಬಂದಿದೆ.
ಗ್ರಾಮ ಪಂಚಾಯತ್‍ಗಳಿಗೆ ಇದ್ದ ಅಧಿಕಾರವನ್ನು ಸರಕಾರವು ನಗರಾಭಿವೃದ್ಧಿ ಇಲಾಖೆಯ ಸ್ಥಳೀಯ ನಗರ ಯೋಜನಾ ಪ್ರಾಧಿಕಾರಗಳಿಗೆ ಹಸ್ತಾಂತರಿಸಿದ ಬಳಿಕ ವಿನ್ಯಾಸ ಅನುಮೋದನೆ ಮತ್ತು ತಾಂತ್ರಿಕ ಅನುಮೋದನೆ ಪ್ರಕ್ರಿಯೆ ವಿಳಂಬವಾಗುತ್ತಿದೆ.ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಯೋಜನಾ ಪ್ರಾಧಿಕಾರ, ಕಾಪು ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಕಚೇರಿ ಉಡುಪಿ ಅವರಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ಯೋಜನಾ ಪ್ರಾಧಿಕಾರ, ಮೂಡಬಿದ್ರೆ ಯೋಜನಾ ಪ್ರಾಧಿಕಾರ, ಪುತ್ತೂರು ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಕಚೇರಿ ಮಂಗಳೂರು ಅವರಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದೆ.
ನಗರ ಯೋಜನಾ ಪ್ರಾಧಿಕಾರಗಳಿಗೆ ಪ್ರತ್ಯಾಯೋಜಿಸದ ನಂತರ ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದಿಂದ ವಿನ್ಯಾಸ ಅನುಮೋದನೆ ಕೋರಿ ಇಲ್ಲಿಯವರೆಗೆ ಒಟ್ಟು 6,809 ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳ ಪೈಕಿ 4,589 ಅರ್ಜಿಗಳು ಮಾತ್ರ ಅನುಮೋದನೆಯಾಗಿ ಉಳಿದ 2,220 ಅರ್ಜಿಗಳು ತಿರಸ್ಕೃತ/ ಹಿಂಬರಹ/ ಬಾಕಿಯಾಗಿರುತ್ತದೆ. ಕಟ್ಟಡ ಪರವಾನಿಗೆ ತಾಂತ್ರಿಕ ಅನುಮೋದನೆ ಕೋರಿ ಇಲ್ಲಿಯವರೆಗೆ ಒಟ್ಟು 696 ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳ ಪೈಕಿ 549 ಅರ್ಜಿಗಳು ಅನುಮೋದನೆಯಾಗಿ ಉಳಿದ 147 ಅರ್ಜಿಗಳು ತಿರಸ್ಕೃತ/ ಹಿಂಬರಹ/ ಬಾಕಿಯಾಗಿರುತ್ತದೆ. ದ.ಕ. ಜಿಲ್ಲೆಯ ಗ್ರಾಮೀಣ ಭಾಗದಿಂದ ವಿನ್ಯಾಸ ಅನುಮೋದನೆ ಕೋರಿ ಇಲ್ಲಿಯವರೆಗೆ ಒಟ್ಟು 9,345 ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳ ಪೈಕಿ 5,510 ಅರ್ಜಿಗಳು ಮಾತ್ರ ಅನುಮೋದನೆಯಾಗಿ ಉಳಿದ 3,835 ಅರ್ಜಿಗಳು ತಿರಸ್ಕೃತ/ ಹಿಂಬರಹ/ ಬಾಕಿಯಾಗಿರುತ್ತದೆ. ಕಟ್ಟಡ ಪರವಾನಿಗೆ ತಾಂತ್ರಿಕ ಅನುಮೋದನೆ ಕೋರಿ ಇಲ್ಲಿಯವರೆಗೆ ಒಟ್ಟು 1188 ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳ ಪೈಕಿ 782 ಅರ್ಜಿಗಳು ಅನುಮೋದನೆಯಾಗಿ ಉಳಿದ 406 ಅರ್ಜಿಗಳು ತಿರಸ್ಕೃತ/ ಹಿಂಬರಹ/ ಬಾಕಿಯಾಗಿರುತ್ತದೆ.
ಸರಕಾರದ ಆದೇಶದಂತೆ ಸದರಿ ಅರ್ಜಿಗಳ ವಿಲೇವಾರಿಗೆ 60 ದಿನಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದ್ದು, ಸದರಿ ಅರ್ಜಿಗಳ ಮೇಲುಸ್ತುವಾರಿ ವಹಿಸಲು ಸೂಕ್ತ ಪ್ರಾಧಿಕಾರ ಇಲ್ಲದಾಗಿದೆ


ಹೆಚ್ಚಿನ ಹುದ್ದೆಗಳು ಖಾಲಿ
ಪುತ್ತೂರು, ಮೂಡಬಿದ್ರೆ, ಸುಳ್ಯ, ಮತ್ತು ಕಾಪು ಯೋಜನಾ ಪ್ರಾಧಿಕಾರಗಳಿಗೆ ತಲಾ ಒಂದರಂತೆ ಮಂಜೂರಾದ ಸದಸ್ಯ ಕಾರ್ಯದರ್ಶಿ ಹುದ್ದೆಯ ಪೈಕಿ ಎಲ್ಲಾ ಹುದ್ದೆಗಳು ಖಾಲಿಯಿದ್ದು ನಿಯೋಜನೆ ಮೇರೆಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಬಂಟ್ವಾಳ ಯೋಜನಾ ಪ್ರಾಧಿಕಾರಕ್ಕೆ ಮಂಜೂರಾದ ಸದಸ್ಯ ಕಾರ್ಯದರ್ಶಿ ಮತ್ತು ಸಹಾಯಕ ನಗರ ಯೋಜಕರು ಹುದ್ದೆಗಳಲ್ಲಿ ಸಹಾಯಕ ನಗರ ಯೋಜಕರು ಹುದ್ದೆ ಖಾಲಿಯಿದೆ. ಕುಂದಾಪುರ ಯೋಜನಾ ಪ್ರಾಧಿಕಾರಕ್ಕೆ ಮಂಜೂರಾದ ಸದಸ್ಯ ಕಾರ್ಯದರ್ಶಿ 1, ನಗರ ಯೋಜಕರು 1, ಬೆರಳಚ್ಚುಗಾರರು 1, ದ್ವಿತೀಯ ದರ್ಜೆ ಸಹಾಯಕರು 1, ಡಿ-ಗ್ರೂಪ್ 1 ಆಗಿದ್ದು, ಇವುಗಳ ಪೈಕಿ ಸದಸ್ಯ ಕಾರ್ಯದರ್ಶಿ, ನಗರ ಯೋಜಕರು ಹುದ್ದೆಗಳು ಮಾತ್ರ ಭರ್ತಿಯಾಗಿದೆ. ಹೆಚ್ಚಿನ ಪ್ರಾಧಿಕಾರಗಳಲ್ಲಿ ಡಿ-ಗ್ರೂಪ್ ಮತ್ತು ಬೆರಳಚ್ಚುಗಾರ ಸೇವೆಯನ್ನು ಹೊರಗುತ್ತಿಗೆ ಆಧಾರದಲ್ಲಿ ಪಡೆಯಲಾಗಿದೆ ಎಂದು ಸಚಿವರು ನೀಡಿದ ಉತ್ತರಲ್ಲಿ ತಿಳಿಸಿದ್ದಾರೆ.
ಉಭಯ ಜಿಲ್ಲೆಗಳ ವಿವಿಧ ನಗರ ಯೋಜನಾ ಪ್ರಾಧಿಕಾರಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಆದಷ್ಟು ಶ್ರೀಘ್ರವಾಗಿ ಭರ್ತಿಗೊಳಿಸಿ ಮತ್ತು 5ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಗ್ರಾ.ಪಂ. ಪ್ರದೇಶಗಳಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಾಲೂಕು ಪಂಚಾಯಗಳಲ್ಲಿ ಪ್ರತ್ಯೇಕವಾದ ನಗರ ಮತ್ತು ಗ್ರಾಮಾಂತರ ಯೋಜನಾ ವಿಭಾಗವನ್ನು ಸ್ಥಾಪಿಸಿ ಗ್ರಾ.ಪಂ.ಗಳಿಗೆ ಮಾರ್ಗದರ್ಶನ ಮತ್ತು ನೆರವು ನೀಡಲು ಪ್ರತೀ ತಾಲೂಕು ಪಂಚಾಯತ್‍ನಲ್ಲಿ ನಗರ ಮತ್ತು ಗ್ರಾಮಾಂತರ ಸಹಾಯಕ ಯೋಜನಾ ನಿರ್ದೇಶಕರ ಹುದ್ದೆಯನ್ನು ಸೃಜಿಸುವರೆಗೆ ಸದರಿ ಅಧಿಕಾರವನ್ನು ಗ್ರಾ.ಪಂ.ಗಳಿಗೆ ನೀಡಿ, ಗ್ರಾಮೀಣ ಜನರ ಅರ್ಜಿಗಳ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ಸರಕಾರವನ್ನು ಆಗ್ರಹಿಸಿದ್ದಾರೆ.
