ಸಂವಿಧಾನದ 73 ನೇ ತಿದ್ದುಪಡಿ ಪ್ರಕಾರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ – 1993 ರ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ಸ್ಥಳೀಯ ಸರ್ಕಾರಗಳೆಂದು ಕರೆಸಿಕೊಳ್ಳುವ ಪಂಚಾಯತ್ ಗಳ ಸಮರ್ಥ ನಿರ್ವಹಣೆಗೆ ಪಂಚಾಯತ್ ರಾಜ್ ಕುರಿತು ಶಾಸನಬದ್ದ ʼರಾಜ್ಯ ಪಂಚಾಯತ್ ರಾಜ್ ಆಯೋಗʼ ಸ್ಥಾಪಿಸುವಂತೆ ಡಾ ಸಿ ನಾರಾಯಣ ಸ್ವಾಮಿ ನೇತೃತ್ವದ ರಾಜ್ಯ 5ನೇ ಹಣಕಾಸು ಆಯೋಗವು ತನ್ನ ಅಂತಿಮ ವರದಿಯಲ್ಲಿ ಶಿಫಾರಸ್ಸು ಮಾಡಿದೆ.


ಅದೇ ರೀತಿ ಸಂವಿಧಾನದ 74ನೇ ತಿದ್ದುಪಡಿಯ ಪರಿಣಾಮಕಾರಿ ಅನುಷ್ಠಾನದ ಕುರಿತು ನಗರ ಸ್ಥಳೀಯ ಸಂಸ್ಥೆಗಳ ಶಾಸನಬದ್ದ ʼರಾಜ್ಯ ಆಯೋಗʼ ರಚಿಸಬಹುದು ಎಂದೂ ರಾಜ್ಯ ಸರಕಾರಕ್ಕೆ ಹಣಕಾಸು ಆಯೋಗ ತನ್ನ ವರದಿಯಲ್ಲಿ ಸಲಹೆ ನೀಡಿದೆ. ಈ ಬಗ್ಗೆ ದಿನಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಸದನದಲ್ಲಿ ಪ್ರಸ್ತಾಪಿದ ಶಾಸಕರು ಸದರಿ ವರದಿಯಲ್ಲಿನ ಈ ಕೆಳಗಿನ ಪ್ರಮುಖ ಸಲಹೆಗಳನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಸರ್ಕಾರವನ್ನು ಶೂನ್ಯ ವೇಳೆಯಲ್ಲಿ ಒತ್ತಾಯಿಸಿದರು

1) ರಾಜ್ಯದ ಪಂಚಾಯತ್ ರಾಜ್ ಸಂಸ್ಥೆಗಳ ಎಲ್ಲಾ ಹಂತಗಳಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಇದ್ದು ಸದರಿ ಖಾಲಿ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಗೊಳಿಸುವುದು
2) ಘನತ್ಯಾಜ್ಯ ನಿರ್ವಹಣೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ಬಳಕೆದಾರರ ಶುಲ್ಕ ಸಂಗ್ರಹ,ಮಾರುಕಟ್ಟೆ ಸಂಪರ್ಕಗಳು ಇತ್ಯಾದಿಗಳನ್ನು ಆದ್ಯತೆ ಮೇಲೆ ಪರಿಹರಿಸುವುದು
3)ಗ್ರಾಮ ಪಂಚಾಯತಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ಗಣಿಗಾರಿಕೆ ರಾಜಧನವನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿಗಳಿಗೆ ನ್ಯಾಯಯುತವಾಗಿ ಹಂಚಿಕೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು
4) ಡಿಜಿಟಲ್ ವ್ಯವಸ್ಥೆಗಳನ್ನು ಸರಿಯಾಗಿ ಜಾರಿಗೊಳಿಸುವುದು ಮತ್ತು ಸೂಕ್ತ ಮೇಲ್ವಿಚಾರಣೆಯ ಮೂಲಕ ತೆರಿಗೆಗಳು ಮತ್ತು ಬಳಕೆದಾರ ಶುಲ್ಕಗಳ ಶೇಕಡ 100 ರ ಸಂಗ್ರಹಣೆಯನ್ನು ಸಾಧಿಸುವತ್ತ ಗಮನ ಹರಿಸುವುದು. ಇತ್ತೀಚೆಗೆ ಅಧಿಸೂಚನೆ ಮಾಡಲಾದ ತೆರಿಗೆ ನಿಯಮಗಳ ಪ್ರಕಾರ ತೆರಿಗೆಗಳನ್ನು ವಿಧಿಸಲು ಪಂಚತಂತ್ರ ತಂತ್ರಾಂಶದಲ್ಲಿ ಸೂಕ್ತ ಮಾರ್ಪಾಡನ್ನು ಮಾಡುವುದು
5) ಗ್ರಾಮ ಪಂಚಾಯತಿ ಪ್ರದೇಶಗಳಲ್ಲಿರುವ ಮೊಬೈಲ್ ಟವರ್ ಗಳು, ವಿಂಡ್ ಮಿಲ್ ಗಳು, ಜಲ ವಿದ್ಯುತ್ ಯೋಜನೆಗಳು ಮತ್ತು ಅಂತಹುದೇ ಹೆಚ್ಚಿನ ಆದಾಯ ಉತ್ಪಾದಿಸುವ ಘಟಕಗಳಿಗೆ ತೆರಿಗೆ ವಿಧಿಸಲು ನಿರ್ದಿಷ್ಟ ಮಾರ್ಗಸೂಚಿಗಳನ್ನು ಹೊರಡಿಸುವುದು
6) ಜಿಲ್ಲಾ ಯೋಜನಾ ಸಮಿತಿಗಳನ್ನು ಬಲಪಡಿಸುವುದು- ಜಿಲ್ಲೆಯ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಸಿದ್ಧಪಡಿಸಿದ ಯೋಜನೆಗಳನ್ನು ಕ್ರೂಡೀಕರಿಸಲು ಮತ್ತು ಸಂವಿಧಾನದಲ್ಲಿ ಕಡ್ಡಾಯಗೊಳಿಸಿದಂತೆ ಜಿಲ್ಲೆಗೆ ಒಟ್ಟಾರೆಯಾಗಿ ಕರಡು ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಲು ಜಿಲ್ಲಾ ಯೋಜನಾ ಸಮಿತಿಗಳನ್ನು ಸಕ್ರಿಯಗೊಳಿಸಿ ಪರಿಣಾಮಕಾರಿಯಾಗಿಸುವುದು
7) ಗ್ರಾಮ ಪಂಚಾಯತಿ ಪ್ರದೇಶಗಳಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಾಲೂಕು ಪಂಚಾಯಿತಿಗಳಲ್ಲಿ ಪ್ರತ್ಯೇಕವಾದ ನಗರ ಮತ್ತು ಗ್ರಾಮಾಂತರ ಯೋಜನಾ ವಿಭಾಗವನ್ನು ಸ್ಥಾಪಿಸುವುದು ಮತ್ತು ಗ್ರಾಮ ಪಂಚಾಯತಿ ಪ್ರದೇಶಗಳಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ನಿಯಮಗಳನ್ನು ಅನುಸರಿಸಲು ಗ್ರಾಮ ಪಂಚಾಯತಿಗಳಿಗೆ ಮಾರ್ಗದರ್ಶನ ಮತ್ತು ನೆರವು ನೀಡಲು ಪ್ರತಿ ತಾಲೂಕು ಪಂಚಾಯತಿಯಲ್ಲಿ ನಗರ ಮತ್ತು ಗ್ರಾಮಾಂತರ ಸಹಾಯಕ ಯೋಜನಾ ನಿರ್ದೇಶಕರ ಹುದ್ದೆಯನ್ನು ಸೃಜಿಸುವುದು
8) ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅದಿನಿಯಮ 1993 ರ ಪ್ರಕರಣ 296(ಎ ) ರ ಪ್ರಕಾರ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಕುಂದು ಕೊರತೆ ನಿವಾರಣಾ ಪ್ರಾಧಿಕಾರಗಳನ್ನು ಸ್ಥಾಪಿಸುವುದು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಭಾ ನಾಯಕರು ಸದರಿ ವರದಿಯು ಸರ್ಕಾರದ ಪರಿಶೀಲನೆಯ ಹಂತದಲ್ಲಿದ್ದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಸದನದಲ್ಲಿ ತಿಳಿಸಿದರು