Mundra: LPG tanker Shivalik, carrying liquefied petroleum gas, arrives at Mundra Port in the Kutch district of Gujarat after crossing the Strait of Hormuz, Monday, March 16, 2026. (IANS/Video Grab)

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಉದ್ವಿಗ್ನತೆಯಿಂದಾಗಿ ಎದುರಾಗಿದ್ದ ಅಡುಗೆ ಅನಿಲ ಪೂರೈಕೆ ವ್ಯತ್ಯಯದ ಆತಂಕಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (ಎಲ್‌ಪಿಜಿ) ಹೊತ್ತ ‘ಶಿವಾಲಿಕ್’ ಹಡಗು ಯುದ್ಧ ಪೀಡಿತ ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಸೋಮವಾರ ಸಂಜೆ ಗುಜರಾತ್‌ನ ಮುಂದ್ರಾ ಬಂದರನ್ನು ತಲುಪಿದೆ. ಇದು ಕೇವಲ ಗುಜರಾತ್‌ಗೆ ಮಾತ್ರವಲ್ಲ, ಕರ್ನಾಟಕದ ಮಂಗಳೂರಿಗೂ ಹಾಗೂ ದಕ್ಷಿಣ ಭಾರತದ ಎಲ್‌ಪಿಜಿ ಬಳಕೆದಾರರಿಗೂ ದೊಡ್ಡ ಮಟ್ಟದ ನೆಮ್ಮದಿ ತಂದಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಗಾಗಿ (IOCL) ಸುಮಾರು 46 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತು ತಂದಿರುವ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ಈ ‘ಶಿವಾಲಿಕ್’ ಹಡಗು, ಮೊದಲ ಹಂತವಾಗಿ ಮುಂದ್ರಾ ಬಂದರಿನಲ್ಲಿ 20 ಸಾವಿರ ಟನ್ ಎಲ್‌ಪಿಜಿಯನ್ನು ಇಳಿಸಲಿದೆ. ಮುಂದ್ರಾ ಬಂದರಿನಲ್ಲಿ ಈ ಪ್ರಮಾಣದ ಅನಿಲವನ್ನು ಸುರಕ್ಷಿತವಾಗಿ ಖಾಲಿ ಮಾಡಲು ಕನಿಷ್ಠ ಒಂದು ದಿನ ಬೇಕಾಗಲಿದೆ.

ತದನಂತರ ಹಡಗು ತನ್ನ ಮುಂದಿನ ಪ್ರಯಾಣವನ್ನು ಆರಂಭಿಸಲಿದ್ದು, ಉಳಿದ 26 ಸಾವಿರ ಟನ್ ಎಲ್‌ಪಿಜಿಯೊಂದಿಗೆ ನವಮಂಗಳೂರು ಬಂದರಿಗೆ ಬರಲಿದೆ. ಮುಂದ್ರಾ ಬಂದರಿನಿಂದ ಹೊರಟು ಮಂಗಳೂರು ತಲುಪಲು ಸರಾಸರಿ ಮೂರರಿಂದ ನಾಲ್ಕು ದಿನಗಳ ಸಮಯ ಬೇಕಾಗಬಹುದು ಎಂದು ನವಮಂಗಳೂರು ಬಂದರು ಪ್ರಾಧಿಕಾರದ ಉನ್ನತ ಮೂಲಗಳು ದೃಢಪಡಿಸಿವೆ. ಈ ಮಹತ್ವದ ಬೆಳವಣಿಗೆ ಕುರಿತು ನವದೆಹಲಿಯಲ್ಲಿ ಮಾಹಿತಿ ನೀಡಿರುವ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಅವರು, “ಮಧ್ಯಪ್ರಾಚ್ಯದ ಬಿಕ್ಕಟ್ಟಿನ ನಡುವೆಯೂ ನಮ್ಮ ಹಡಗುಗಳ ಸುರಕ್ಷಿತ ಆಗಮನಕ್ಕೆ ಎಲ್ಲ ರೀತಿಯ ಅತ್ಯಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಿವಾಲಿಕ್ ಹಡಗಿನ ಸರಕು ಇಳಿಕೆಯಲ್ಲಿ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಲು ಮುಂದ್ರಾ ಬಂದರಿನಲ್ಲಿ ಆದ್ಯತೆಯ ಬರ್ತಿಂಗ್ (ಲಂಗರು ಹಾಕುವ ಪ್ರಕ್ರಿಯೆ) ಮತ್ತು ತ್ವರಿತ ದಾಖಲಾತಿ ವಿಲೇವಾರಿ ವ್ಯವಸ್ಥೆಯನ್ನು ಮಾಡಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.