ನವದೆಹಲಿ: ಫ್ಯೂಯಲ್ ಕಂಟ್ರೋಲ್‌ ಸ್ವಿಚ್‌ ನಲ್ಲಿ (ಇಂಧನ ನಿಯಂತ್ರಣ ಸ್ವಿಚ್‌) ದೋಷ ಕಾಣಿಸಿಕೊಂಡ ಹಿನ್ನೆಲೆ ಲಂಡನ್‌ ನಿಂದ ಬೆಂಗಳೂರಿಗೆ ಹಾರಾಟ ನಡೆಸಲು ನಿಗದಿಯಾಗಿದ್ದ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಹಾರಾಟವನ್ನ ಸ್ಥಗಿತಗೊಳಿಸಲಾಗಿದೆ.

ದೋಷ ಕಾಣಿಸಿಕೊಂಡ ಬಗ್ಗೆ ಪೈಲಟ್‌ ವರದಿ ಮಾಡಿದ ಬಳಿಕ ವಿಮಾನ ಹಾರಾಟವನ್ನ ಸ್ಥಗಿತಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ನಿಗದಿಯಂತೆ AI132 ಸಂಖ್ಯೆಯ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಲಂಡನ್‌ನಿಂದ ಬೆಂಗಳೂರಿಗೆ ತೆರಳಬೇಕಿತ್ತು. ಆದ್ರೆ ವಿಮಾನ ಹಾರಾಟಕ್ಕೆ ಮುಂಚಿತವಾಗಿ ಪೈಲಟ್‌ ಕಾರ್ಯ ವಿಧಾನಗಳನ್ನ ಪರಿಶೀಲಿಸುವಾಗ ಫ್ಯೂಯಲ್ ಕಂಟ್ರೋಲ್‌ ಸ್ವಿಚ್‌ನಲ್ಲಿ ದೋಷ ಕಾಣಿಸಿಕೊಂಡಿರುವುದನ್ನ ಗುರುತಿಸಿದ್ರು. ಈ ಬಗ್ಗೆ ವಿಮಾನಯಾನ ಸಂಸ್ಥೆಗೆ ವರದಿ ಮಾಡಿದರು. ಕೂಡಲೇ ಎಚ್ಚೆತ್ತ ಸಂಸ್ಥೆ ಆ ವಿಮಾನ ಸೇವೆಯನ್ನ ರದ್ದುಗೊಳಿಸಿತು. 

ಈ ಕುರಿತು ವಿಮಾನಯಾನ ಸಂಸ್ಥೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ನಮ್ಮ ಪೈಲಟ್‌ಗಳಲ್ಲಿ ಒಬ್ಬರು ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ ಇರುವ ಬಗ್ಗೆ ವರದಿ ಮಾಡಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಬಂದಿದೆ. ಆರಂಭಿಕ ಮಾಹಿತಿ ಸ್ವೀಕರಿಸಿದ ಬಳಿಕ ವಿಮಾನ ಹಾರಾಟವನ್ನ ಸ್ಥಗಿತಗೊಳಿಸಿದ್ದೇವೆ. ಜೊತೆಗೆ ಪೈಲಟ್‌ನ ಕಾಳಜಿಗಳನ್ನು ಆದ್ಯತೆಯ ಆಧಾರದ ಮೇಲೆ ಪರಿಶೀಲಿಸಲು OEM ಒಳಗೊಳ್ಳುತ್ತಿದ್ದೇವೆ ಎಂದು ಹೇಳಿದೆ. OEM ವಿಮಾನದ ಬಿಡಿ ಭಾಗಗಳ ತಯಾರಿಕ ಸಂಸ್ಥೆಯಾಗಿದೆ.