



ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಸುಮಂತ್ ಎಂಬ ಬಾಲಕ ಸುಮಾರು ಐದು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಕ್ಕಾಗಿ ಹೋರಾಟ ಮುಂದುವರಿದಿದೆ.

ಈ ಪ್ರಕರಣವನ್ನು ಈ ಹಿಂದೆಯೇ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದ ಶಾಸಕ ಹರೀಶ್ ಪೂಂಜ, ಬಳಿಕ ಗೃಹಮಂತ್ರಿಗಳನ್ನು ಭೇಟಿಯಾಗಿ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಮನವಿ ಸಲ್ಲಿಸಿದ್ದರು. ಆದರೆ, ಇಷ್ಟೊಂದು ಸಮಯ ಕಳೆದರೂ ಕುಟುಂಬಕ್ಕೆ ನ್ಯಾಯ ದೊರಕದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಮೃತ ಬಾಲಕ ಸುಮಂತ್ ಅವರ ಪೋಷಕರು ಹಾಗೂ ಕುಟುಂಬ ಸದಸ್ಯರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿದ ಶಾಸಕ, ಪ್ರಕರಣದ ತನಿಖೆಯ ಪ್ರಗತಿ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಆಯಾಮಗಳಲ್ಲೂ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ಶೀಘ್ರದಲ್ಲಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
“ನಿರಪರಾಧಿ ಬಾಲಕನ ಸಾವಿನ ಸತ್ಯ ಹೊರಬಂದು ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಕುಟುಂಬದೊಂದಿಗೆ ನಿರಂತರವಾಗಿರಲಿದೆ” ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
