


ಸುಳ್ಯ: ಕಳ್ಳತನ ಹಾಗೂ ಪೊಲೀಸ್ ವಶದಿಂದ ಪರಾರಿಯಾದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸುಳ್ಯದ ಅಜ್ಜಾವರ ನಿವಾಸಿ ಎ.ಎಂ. ಅಜೀಜ್‌ಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 96/2006ರ ಕಳ್ಳತನ ಪ್ರಕರಣ ಹಾಗೂ 103/2018ರ ಪೊಲೀಸ್ ವಶದಿಂದ ಪರಾರಿಯಾದ ಪ್ರಕರಣಗಳ ವಿಚಾರಣೆಯನ್ನು ಮಾನ್ಯ ಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ನಡೆಸಿತು.


ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶೆ ಶ್ರೀಮತಿ ದಮಯಂತಿ ಅವರು ಶಿಕ್ಷೆ ಪ್ರಕಟಿಸಿದ್ದಾರೆ.
ಪೊಲೀಸ್ ವಶದಿಂದ ಪರಾರಿಯಾದ ಪ್ರಕರಣದಲ್ಲಿ ಒಂದು ವರ್ಷದ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹5,000 ದಂಡ, ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ 45 ದಿನಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಇನ್ನು ಕಳ್ಳತನ ಪ್ರಕರಣದಲ್ಲಿ ಐಪಿಸಿ ಕಲಂ 457ರಡಿ ಮೂರು ವರ್ಷದ ಸಾದಾ ಕಾರಾಗೃಹ ಶಿಕ್ಷೆ ಹಾಗೂ ₹5,000 ದಂಡ, ದಂಡ ಪಾವತಿಸದಿದ್ದರೆ 45 ದಿನಗಳ ಹೆಚ್ಚುವರಿ ಶಿಕ್ಷೆ ವಿಧಿಸಲಾಗಿದೆ. ಹಾಗೆಯೇ ಐಪಿಸಿ ಕಲಂ 380ರಡಿ ಮೂರು ವರ್ಷದ ಸಾದಾ ಕಾರಾಗೃಹ ಶಿಕ್ಷೆ ಮತ್ತು ₹5,000 ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಈ ಮೂಲಕ ದೀರ್ಘಕಾಲದ ಎರಡು ಪ್ರಕರಣಗಳಲ್ಲಿ ಆರೋಪಿಗೆ ಶಿಕ್ಷೆ ಪ್ರಕಟಗೊಂಡಿದೆ.
