


ಬೆಂಗಳೂರು: ಬೇಸಿಗೆ ರಜೆ ಬಳಿಕ ಇಂದಿನಿಂದ ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಮಕ್ಕಳಲ್ಲಿ ಶಾಲಾ ಪ್ರಾರಂಭದ ಸಂಭ್ರಮ ಜೋರಾಗಿದೆ.ಶಾಲಾ ಶಿಕ್ಷಣ ಇಲಾಖೆ (Department of School Education) ಸಕಲ ಸಿದ್ಧತೆ ಮಾಡಿಕೊಂಡು ಇಂದಿನಿಂದ ಶಾಲಾ-ಕಾಲೇಜುಗಳನ್ನು ಆರಂಭಿಸಿದ್ದು, ಈ ಮೂಲಕ 2026-27ನೇ ಸಾಲಿನ ಶೈಕ್ಷಣಿಕ ತರಗತಿಗಳು ಪ್ರಾರಂಭಗೊಂಡಿವೆ.


ಶಿಕ್ಷಣ ಇಲಾಖೆ ಹಬ್ಬದ ವಾತಾವರಣ, ಸಂಭ್ರಮ, ಸಡಗರದಿಂದ ಮಕ್ಕಳನ್ನ ಸ್ವಾಗತ ಮಾಡಲು ಆದೇಶಿಸಿದ್ದು, ಮಧ್ಯಾಹ್ನ ಬಿಸಿಯೂಟದಲ್ಲಿ ಸಿಹಿ ಮಾಡಲು ಸೂಚನೆ ನೀಡಿದೆ. ಅದರಂತೆ ಶಾಲೆಯನ್ನ ತಳಿರು-ತೋರಣ, ರಂಗೋಲಿಯಿಂದ ಸಿಂಗಾರ ಮಾಡಿ, ಶಿಕ್ಷಕರು ಮಕ್ಕಳನ್ನು ಸ್ವಾಗತಕೋರಿದ್ದಾರೆ.

ಇನ್ನೂ ರಾಜ್ಯ ರಾಜಕೀಯದಲ್ಲಿ ಕೆಲ ಬೆಳವಣಿಗೆಗಳಾದ ಹಿನ್ನೆಲೆ ಶಿವಮೊಗ್ಗದಲ್ಲಿ (Shivamogga) ಇಂದು (ಜೂ.1) ನಿಗದಿಯಾಗಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಶಾಲಾ ಹಂತದಲ್ಲಿ ಕಾರ್ಯಕ್ರಮ ಮಾಡಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಇಂದು ಶಾಲೆ ಪ್ರಾರಂಭದ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು ಹಾಗೂ ಪೋಷಕರ ಸಭೆ ನಡೆಸಲು ತಿಳಿಸಿದೆ. ಶಾಲೆಯ ಮೊದಲ 15 ದಿನ ಸೇತುಬಂಧ ಮೂಲಕ ರಿವಿಷನ್ ತರಗತಿ ನಡೆಸುವಂತೆ ಇಲಾಖೆ ಆದೇಶಿಸಿದೆ.
