



ಬೆಂಗಳೂರು: ಮುಖ್ಯಮಂತ್ರಿ ಆಗಿ ಪದಗ್ರಹಣ ಮಾಡಿದ ದಿನವೇ ಕಾಂಗ್ರೆಸ್ ಪಕ್ಷದ ನೂತನ ಕಚೇರಿ (Congress Office) ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಸಿದ್ಧತೆ ನಡೆಸಿದ್ದಾರೆ.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನವನ್ನು ಸಂಪೂರ್ಣವಾಗಿ ಹೊಸದಾಗಿ ನಿರ್ಮಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಅದೇ ಸಂಜೆ ರಾಹುಲ್ ಗಾಂಧಿ (Rahul Gandhi) ಸಮ್ಮುಖದಲ್ಲಿ ನೂತನ ಭವನಕ್ಕೆ ಭೂಮಿ ಪೂಜೆ ನೆರವೇರಿಸುವ ಯೋಜನೆ ರೂಪಿಸಲಾಗಿದೆ.

ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಜಾಗಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್, ಸಿದ್ಧತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಎಲ್ಲೆಲ್ಲಿ ಯಾವ ವ್ಯವಸ್ಥೆ ಮಾಡಬೇಕು, ಎಷ್ಟು ಕುರ್ಚಿಗಳ ವ್ಯವಸ್ಥೆ ಇರಬೇಕು ಹಾಗೂ ಪ್ರಮಾಣವಚನ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಹೇಗಿರಬೇಕು ಎಂಬ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ರಾಜ್ಯದಾದ್ಯಂತ 100 ಪಕ್ಷದ ಕಚೇರಿಗಳನ್ನು ನಿರ್ಮಿಸುವ ಗುರಿಯನ್ನು ಕಾಂಗ್ರೆಸ್ ಹಾಕಿಕೊಂಡಿದ್ದು, ಅವುಗಳಿಗೂ ಮತ್ತೊಂದು ದಿನ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಡಿಕೆಶಿ ತಿಳಿಸಿದರು.
