


ಢಾಕಾ: ಇತ್ತೀಚಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಕಣ್ಣುಗಳನ್ನು ಹೋಲುವ ಎಮ್ಮೆಯೊಂದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ಎಮ್ಮೆಯನ್ನು ಬಕ್ರೀದ್‌ಗೆ (Bakrid) ಬಲಿ ಕೊಡಲು ಮುಸ್ಲಿಮರು ಖರೀದಿ ಮಾಡಿದ್ದರು. ಆದರೆ, ಈ ಎಮ್ಮೆಯನ್ನು ಇದೀಗ ರಕ್ಷಿಸಲಾಗಿದ್ದು, ಬಾಂಗ್ಲಾದೇಶದ ರಾಷ್ಟ್ರೀಯ ಮೃಗಾಲಯಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ವರದಿಯಾಗಿದೆ.
ಸುಮಾರು 700 ಕೆ.ಜಿ ತೂಕವಿರುವ ಈ ಎಮ್ಮೆ ವಿಭಿನ್ನವಾದ ದೇಹದ ಮೈಕಟ್ಟು, ಹಣೆ ಹಾಗೂ ಕೂದಲಿನ ಫೋಟೋಗಳು ವೈರಲ್ ಆಗುತ್ತಿವೆ. ಕೆಲವರು ಇದನ್ನು ಡೊನಾಲ್ಡ್ ಟ್ರಂಪ್ ಎಮ್ಮೆ ಎಂದೇ ಇದಕ್ಕೆ ಹೆಸರಿಟ್ಟಿದ್ದರು.


ಈ ಎಮ್ಮೆಯನ್ನು ಈ ಮೊದಲು ಅದರ ಮಾಲೀಕ ಜಿಯಾ ಉದ್ದೀನ್ ಮೃಧಾ ಮಾರಾಟ ಮಾಡಿದ್ದರು. ಆದರೆ, ಹೆಚ್ಚುತ್ತಿರುವ ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ಕೊನೆಯ ಕ್ಷಣದಲ್ಲಿ ಮಧ್ಯಪ್ರವೇಶಿಸಿ ಪ್ರಾಣಿಯನ್ನು ಖರೀದಿಸಿ ಢಾಕಾದ ಬಾಂಗ್ಲಾದೇಶದ ರಾಷ್ಟ್ರೀಯ ಮೃಗಾಲಯಕ್ಕೆ ಸ್ಥಳಾಂತರಿಸಿದರು. ಅಲ್ಲಿ ಈ ಎಮ್ಮೆಯನ್ನು ಬಲಿ ನೀಡುವುದರ ಬದಲು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತದೆ ಎಂದು ಹೇಳಿದ್ದಾರೆ.
