

ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಮುಲ್ಕಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಕಳುವಾದ ಬೈಕ್ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ದಿನಾಂಕ 18-05-2026 ರಂದು ಮುಲ್ಕಿ ಜಂಕ್ಷನ್‌ನ ಅಪೋಲೊ ಫಾರ್ಮಾ ಸಮೀಪ ನಿಲ್ಲಿಸಿದ್ದ ಕೆಎ 20 ಇಬಿ 6383 ಸಂಖ್ಯೆಯ ಹೋಂಡಾ ಯುನಿಕಾರ್ನ್ ಬೈಕ್ ಕಳ್ಳತನವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಮುಲ್ಕಿ ಪೊಲೀಸರು ತನಿಖೆ ನಡೆಸಿ ಆರೋಪಿಗಳಾದ ಮೊಹಮ್ಮದ್ ರಾಝಿಕ್ (36) ಹಾಗೂ ಉಬೈದತ್ ಹೈದರ್ (31) ಅವರನ್ನು ಬಂಧಿಸಿದ್ದಾರೆ.


ಬಂಧಿತರಿಂದ ಸುಮಾರು 20 ಸಾವಿರ ರೂ. ಮೌಲ್ಯದ ಕಳುವಾದ ಹೋಂಡಾ ಯುನಿಕಾರ್ನ್ ಬೈಕ್ ಹಾಗೂ ಸುಮಾರು 18 ಸಾವಿರ ರೂ. ಮೌಲ್ಯದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮೊಹಮ್ಮದ್ ರಾಝಿಕ್ ವಿರುದ್ಧ ಸುರತ್ಕಲ್, ಪಣಂಬೂರು ಹಾಗೂ ಮುಲ್ಕಿ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ. ಉಬೈದತ್ ಹೈದರ್ ವಿರುದ್ಧ ಪಣಂಬೂರು ಠಾಣೆಯಲ್ಲಿ ಹಲ್ಲೆ, ಗಲಭೆ ಹಾಗೂ ಬೆದರಿಕೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮುಲ್ಕಿ ಠಾಣೆಯ ಪಿಎಸ್‌ಐ ಹಾಗೂ ಕ್ರೈಂ ತಂಡದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
