ಬೆಂಗಳೂರು: ಅಹಿಂದ ನಾಯಕ ಸಿದ್ದರಾಮಯ್ಯ (Siddaramaiah) ರಾಜಕೀಯ ಬದುಕಿನ ಮಹತ್ವದ ಅಧ್ಯಾಯಕ್ಕೆ ತೆರೆ ಬೀಳುತ್ತಿದೆ. ಕಾಂಗ್ರೆಸ್‌ನಲ್ಲಿ (Congress) ಎರಡನೇ ಅವಧಿಗೆ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡ್ತಿದ್ದಾರೆ. ರಾಜ್ಯದ ಒಬ್ಬ ಟಾಪ್ ಮಾಸ್ ಲೀಡರ್ ಆಗಿದ್ದ ಸಿದ್ದರಾಮಯ್ಯ ಅಧಿಕಾರ ರಾಜಕೀಯ ಈ ನಿರ್ಗಮನದೊಂದಿಗೆ ಕೊನೆಗೊಳ್ತಿದೆ.

ಕಳೆದೆರಡು ದಿನಗಳಿಂದ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬಿರುಸಿನ ವಿದ್ಯಮಾನಗಳು ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿವೆ. ಮೊದಲೇ ನಿರ್ಣಯಿಸಿದಂತೆ ಇಂದು ಸಿದ್ದರಾಮಯ್ಯ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಈಗಾಗಲೇ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮುನ್ನ ಒಂದಷ್ಟು ಬೆಳವಣಿಗೆಗಳಿಗೆ ಸಿಎಂ ಸರ್ಕಾರಿ ನಿವಾಸ ಕಾವೇರಿ ಸಾಕ್ಷಿ ಆಗ್ತಿದೆ. ಮುಖ್ಯಮಂತ್ರಿಗಳು ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ ಕರೆದಿದ್ದಾರೆ. ಈ ಸಭೆಗೆ ಎಲ್ಲ ಸಚಿವರಿಗೂ ಆಹ್ವಾನಿಸಲಾಗಿದೆ. ಎಲ್ಲಾ ಸಚಿವರಿಗೂ ಮುಖ್ಯಮಂತ್ರಿ ಕಚೇರಿಯಿಂದ ಸಂದೇಶ ರವಾನೆಯಾಗಿದೆ. ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ, ಡಿಸಿಎಂ ಡಿಕೆ ಶಿವಕುಮಾರ್ ಕೂಡಾ ಭಾಗಿಯಾಗ್ತಿದ್ದಾರೆ. ಈ ಸಭೆಯಲ್ಲಿ ಸಿದ್ದರಾಮಯ್ಯ ತಮ್ಮ ವಿದಾಯ ಭಾಷಣ ಮಾಡಲಿದ್ದಾರೆ. ತಮ್ಮ ರಾಜೀನಾಮೆ ಬಗ್ಗೆ ಸಿಎಂ ಘೋಷಣೆ ಮಾಡಲಿದ್ದಾರೆ.