ಬೆಂಗಳೂರು: ಮೂರು ವರ್ಷಗಳಿಂದ ರಾಜ್ಯವನ್ನು ಆಳಿದ ಸಿದ್ದರಾಮಯ್ಯ (Siddaramaiah) ಆಳ್ವಿಕೆ ಇನ್ನೇನ್ನೂ ಅಂತ್ಯ ಕಾಲಕ್ಕೆ ಬಂದು ನಿಂತಿದ್ದು, ಗುರುವಾರ (ಮೇ 28) ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ.

ದೆಹಲಿ ಹೈವೋಲ್ಟೇಜ್ ಸಭೆ ಬೆನ್ನಲ್ಲೇ ಸ್ಫೋಟಕ ಬೆಳವಣಿಗೆಗೆ ರಾಜ್ಯ ಕಾಂಗ್ರೆಸ್ ಸಾಕ್ಷಿಯಾಗಿದೆ. ಶುಕ್ರವಾರ (ಮೇ 29) ಕಾಂಗ್ರೆಸ್ (Congress) ಶಾಸಕಾಂಗ ಪಕ್ಷದ ಸಭೆ ಸಾಧ್ಯತೆಯಿದ್ದು, ಈ ಸಭೆಯಲ್ಲಿ ಚರ್ಚಿಸಿ ಮಹತ್ವದ ನಿರ್ಣಯ ಕೈಗೊಳ್ಳುವುದೊಂದೇ ಬಾಕಿ ಉಳಿದಿದೆ. ಇಂದು ರಾಜ್ಯಕ್ಕೆ ಕೆ.ಸಿ ವೇಣುಗೋಪಾಲ್ ಹಾಗೂ ರಣದೀಪ್ ಸುರ್ಜೇವಾಲಾ ಆಗಮಿಸಲಿದ್ದು, ನಾಳೆ ಶಾಸಕಾಂಗ ಪಕ್ಷದ ಸಭೆ ಖಚಿತವಾಗಿದೆ. ಶಾಸಕರಿಗೆ ಸಿದ್ದರಾಮಯ್ಯ ಎಕ್ಸಿಟ್ ಬಗ್ಗೆ ಮನವರಿಕೆ ಮಾಡುವ ಸಾಧ್ಯತೆಯಿದೆ. ಡಿಕೆ ಶಿವಕುಮಾರ್ (DK Shivakumar) ಅವರನ್ನು ಶಾಸಕಾಂಗ ಪಕ್ಷದ ಹೊಸ ನಾಯಕನಾಗಿ ಆಯ್ಕೆ ಮಾಡುವುದೂ ಫಿಕ್ಸ್ ಆಗಿದೆ. 

ದೆಹಲಿಗೆ ಹೋದ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಯೊಂದು ಹೆಜ್ಜೆಯನ್ನು ಎಚ್ಚರಿಕೆಯಿಂದಲೇ ಇಟ್ಟಿದ್ದಾರೆ. ಎಚ್ಚರಿಕೆ ಮತ್ತು ಚಾಣಾಕ್ಷ ನಡೆ ಪ್ರದರ್ಶಿಸಿದ ಡಿಕೆ ಶಿವಕುಮಾರ್, ಎಲ್ಲೂ ಸಹ ತಮ್ಮ ಭಾವನೆಗಳನ್ನು ಬಹಿರಂಗವಾಗಿ ಪ್ರದರ್ಶಿಸಲಿಲ್ಲ. ಪ್ರಸ್ತುತ ಬೆಳವಣಿಗೆಯಿಂದ ತಮಗೆ ಸಂತೋಷ ಆಗಿದೆ. ಜಯ ಸಿಕ್ಕಿದೆ ಅಂತಾ ಎಲ್ಲಿಯೂ ಬಹಿರಂಗವಾಗಿ ತೋರಿಸಿಕೊಂಡಿಲ್ಲ. ಮಾಧ್ಯಮಗಳ ಜೊತೆಗೂ ನಾಜೂಕಿನ ನಡೆ ಪ್ರದರ್ಶಿಸಿದ್ದು, ಮಾತಾಡದೇ ಮೌನದಿಂದಲೇ ಕುರ್ಚಿ ಗಿಟ್ಟಿಸಿಕೊಂಡಿದ್ದಾರೆ.

ರಾಜ್ಯಸಭೆ ಚುನಾವಣೆಗೂ ಮೊದಲೇ ಸಿಎಂ ಬದಲಾವಣೆಗೆ ಹೈಕಮಾಂಡ್ ಮುಹೂರ್ತ ಇಟ್ಟಿದೆ. ಸಿಎಂ, ಡಿಸಿಎಂ ಇಬ್ಬರಿಗೂ ರಾಹುಲ್ ಗಾಂಧಿ ಈ ಬಗ್ಗೆ ಮೆಸೇಜ್ ಪಾಸ್ ಮಾಡಿದ್ದಾರೆ. ರಾಹುಲ್ ಮಾತು ಪಾಲಿಸಲು ಮುಂದಾದ ಸಿದ್ದರಾಮಯ್ಯ, ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೂ ಸೈ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಜ್ಯಸಭೆಗೆ ಸಿದ್ದರಾಮಯ್ಯರನ್ನು ಕರೆಸಿಕೊಳ್ಳುವ ಲೆಕ್ಕಾಚಾರದಲ್ಲಿ ಹೈಕಮಾಂಡ್ ನಾಯಕರು ಇದ್ದಾರೆ.