

ಪುತ್ತೂರು: ಪುಣಚದ ಮೂರು ಕುಟುಂಬಗಳಿಗೆ 94ಸಿ ಹಕ್ಕುಪತ್ರ ನೀಡಿಲ್ಲವೆಂದು ಆರೋಪಿಸಿ ಬಿಜೆಪಿ ಬಂಟ್ವಾಳ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಗೊಂದಲ ಸೃಷ್ಟಿಸಿದೆ ಎಂದು ಅಶೋಕ್ ಕುಮಾರ್ ರೈ ಆರೋಪಿಸಿದರು.ಸೋಮವಾರ ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಬಂಧಿತ ಕುಟುಂಬಗಳು ಕಳೆದ ಮೇ 14ರಂದು ತಮ್ಮ ಕಚೇರಿಗೆ ಬಂದು ಹಕ್ಕುಪತ್ರ ಸಿಗದಿರುವ ಬಗ್ಗೆ ಮನವಿ ಮಾಡಿದ್ದು, ತಾವು ಕಂದಾಯ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಿದ್ದಾಗಿ ತಿಳಿಸಿದರು. ಆದರೆ ಸರ್ಕಾರದ ಸುತ್ತೋಲೆ ಪ್ರಕಾರ ಸಿಎಂ, ಸಚಿವರು ಅಥವಾ ಶಾಸಕರ ಸಮ್ಮುಖದಲ್ಲೇ ಹಕ್ಕುಪತ್ರ ವಿತರಣೆ ನಡೆಯಬೇಕಿರುವುದರಿಂದ ಬಂಟ್ವಾಳ ತಹಶೀಲ್ದಾರ್ ದಿನಾಂಕ ನಿಗದಿಪಡಿಸಿರಲಿಲ್ಲ ಎಂದರು.

ಈ ಕುಟುಂಬಗಳಿಗೆ ಹಿಂದೆ ಮನೆ ನಿರ್ಮಾಣದ ಸಂದರ್ಭ ತಮ್ಮ ಟ್ರಸ್ಟ್ ಮೂಲಕ ಶೀಟ್ ಹಾಗೂ ಸಿಮೆಂಟ್ ಸಹಾಯ ನೀಡಿದ್ದಾಗಿ ತಿಳಿಸಿದ ಅವರು, 94ಸಿ ಹಕ್ಕುಪತ್ರ ನೀಡುವ ವಿಚಾರದಲ್ಲಿ ಕಾನೂನು ಸಂಬಂಧಿತ ಆಕ್ಷೇಪಣೆಗಳಿವೆ ಎಂದರು. ಕುಟುಂಬಗಳು 15 ವರ್ಷಗಳಿಂದ ವಾಸವಿರುವುದಕ್ಕೆ ಸಮರ್ಪಕ ದಾಖಲೆಗಳಿಲ್ಲದೆ ಇರುವುದಲ್ಲದೆ, ಸ್ಥಳೀಯರಿಂದ ಲೋಕಾಯುಕ್ತ, ಎಸಿ ಹಾಗೂ ಡಿಸಿಗೆ ದೂರುಗಳೂ ಸಲ್ಲಿಕೆಯಾಗಿವೆ. ಹೀಗಾಗಿ ಕಾನೂನಾತ್ಮಕವಾಗಿ ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಅವರಲ್ಲಿ ಒಬ್ಬರು ಈ ಹಿಂದೆಲೇ ಹಕ್ಕುಪತ್ರ ಪಡೆದಿದ್ದಾರೆ ಎಂದೂ ಸ್ಪಷ್ಟಪಡಿಸಿದರು.


ಹಿಂದಿನ ಬಿಜೆಪಿ ಶಾಸಕರ ಅವಧಿಯಲ್ಲಿ ಅಕ್ರಮ-ಸಕ್ರಮ, 94ಸಿ ಹಾಗೂ 94ಸಿಸಿ ಸಂಬಂಧಿಸಿದ ಸುಮಾರು 32 ಸಾವಿರ ಕಡತಗಳು ಬಾಕಿ ಉಳಿದಿದ್ದವು. ಅದರಲ್ಲಿ ತಾವು ಈಗಾಗಲೇ 4200 ಕಡತಗಳನ್ನು ವಿಲೇವಾರಿ ಮಾಡಿ, ಅಕ್ರಮ-ಸಕ್ರಮದಡಿ ಸುಮಾರು 2 ಸಾವಿರ ಎಕರೆ ಜಾಗ ಮಂಜೂರು ಮಾಡಿರುವುದಾಗಿ ಹೇಳಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ತಿರಸ್ಕೃತಗೊಂಡಿದ್ದ ಸುಮಾರು 9 ಸಾವಿರ 94ಸಿ ಅರ್ಜಿಗಳನ್ನು ಮರುಪರಿಶೀಲನೆ ಮಾಡಿ ಬಡವರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಹಿಂದಿನ ಶಾಸಕರ ಅವಧಿಯಲ್ಲಿ ಅಕ್ರಮ-ಸಕ್ರಮಕ್ಕೆ ಸಂಬಂಧಿಸಿ ಏಜೆಂಟ್‌ಗಳ ಮೂಲಕ ಎಕರೆಗೆ ₹2 ಲಕ್ಷ ವಸೂಲಿ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ ಎಂದು ಆರೋಪಿಸಿದ ಅವರು, ತಾವು ಯಾವುದೇ ಹಣ ಪಡೆಯದೆ ಬಿಜೆಪಿ ಪಕ್ಷದ ಜನಪ್ರತಿನಿಧಿಗಳು ಹಾಗೂ ಮುಖಂಡರಿಗೂ ಜಾಗ ಮಂಜೂರು ಮಾಡಿರುವುದಾಗಿ ಹೇಳಿದರು.
ಪ್ರತಿಭಟನೆಯ ವೇಳೆ “ಜಾಗ ಶಾಸಕರ ಅಪ್ಪನದ್ದಾ?” ಎಂಬ ಪದ ಬಳಕೆ ಮಾಡಿರುವುದು ನೋವು ತಂದಿದೆ ಎಂದು ಹೇಳಿದ ಅವರು, ಪ್ರತಿಭಟನೆಯ ಹಿಂದೆ ಇದ್ದ ಗಿರಿಧರ್ ನಾಯ್ಕ್ ಸಂಘಟನೆಯ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳೂ ಬಂದಿವೆ ಎಂದು ಆರೋಪಿಸಿದರು.
ಉಪ್ಪಿನಂಗಡಿ ದೇವಸ್ಥಾನ ಅಭಿವೃದ್ಧಿಗೆ ಘೋಷಿಸಲಾದ ₹352 ಕೋಟಿ ಯೋಜನೆ ಕೇಂದ್ರ ಸರ್ಕಾರದ ಪ್ರಸಾದಂ ಯೋಜನೆ ಅಲ್ಲ, ಅದು ರಾಜ್ಯ ಸರ್ಕಾರದ ಯೋಜನೆ ಎಂದು ಸ್ಪಷ್ಟಪಡಿಸಿದ ಅವರು, ಬ್ರಿಜೇಶ್ ಚೌಟ ಹಾಗೂ ಕಿಶೋರ್ ಬೊಟ್ಯಾಡಿಯವರು ಬಜೆಟ್ ಪುಸ್ತಕ ಓದಿ ಅರಿತುಕೊಳ್ಳಲಿ ಎಂದು ಟೀಕಿಸಿದರು. ಕೇಂದ್ರದ ಪ್ರಸಾದಂ ಯೋಜನೆಯಡಿ ಅನುದಾನ ನೀಡುವಂತೆ ಮನವಿ ಮಾಡಿದ್ದರೂ ರಾಜ್ಯಕ್ಕೆ ಯಾವುದೇ ಹಣ ಬಂದಿಲ್ಲ ಎಂದರು.
