


ಉಳ್ಳಾಲ ಸಜೀಪನಡು ಗ್ರಾಮದಲ್ಲಿ ಮರದ ಕೊಂಬೆ ತೆರವು ವಿಚಾರವಾಗಿ ಇಬ್ಬರ ನಡುವೆ ನಡೆದ ಜಗಳ ಹಲ್ಲೆ ಪ್ರಕರಣದ ಮಟ್ಟಕ್ಕೆ ತಲುಪಿದೆ. ಸುರೇಶ್ ರೈ ಎಂಬವರ ದೂರಿನ ಪ್ರಕಾರ, ಅವರ ತಾಯಿಯ ಮನೆಯ ಹಂಚಿಗೆ ತಾಗಿಕೊಂಡಿದ್ದ ಮರದ ಕೊಂಬೆಯನ್ನು ತೆರವುಗೊಳಿಸುವಂತೆ ಹಲವು ಬಾರಿ ತಿಳಿಸಿದ್ದರೂ ಕ್ರಮ ಕೈಗೊಳ್ಳಲಾಗಿರಲಿಲ್ಲ ಎನ್ನಲಾಗಿದೆ.
ಮೇ 23ರಂದು ಸಂಜೆ ಸುರೇಶ್ ರೈ ಮರದ ಕೊಂಬೆಯನ್ನು ಕಡಿಯುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಸೋಮನಾಥ ಭಂಡಾರಿ ತೆಂಗಿನಕಾಯಿ ಹಾಗೂ ಕಲ್ಲುಗಳನ್ನು ಎಸೆದು ಗಾಯಗೊಳಿಸಿದ್ದು, ಮಧ್ಯ ಪ್ರವೇಶಿಸಿದ ಸುರೇಶ್ ರೈ ಅವರ ಪತ್ನಿಗೆ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಾಯಗೊಂಡ ಸುರೇಶ್ ರೈ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದೇ ವೇಳೆ, ಸುರೇಶ್ ರೈ ಹಾಗೂ ಅವರ ಪತ್ನಿ ತಮ್ಮ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಸೋಮನಾಥ ಭಂಡಾರಿಯವರೂ ಪ್ರತಿದೂರು ಸಲ್ಲಿಸಿದ್ದು, ಪೊಲೀಸರು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
