ಕಡಬ: ಕೋಡಿಂಬಾಳ ಗ್ರಾಮದ ಕೋರಿಯರ್ ಎಂಬಲ್ಲಿ ವ್ಯಕ್ತಿಯೊಬ್ಬರು ರೈಲಿನಡಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಮೇ 24 ರ ಮುಂಜಾನೆ ಬೆಳಕಿಗೆ ಬಂದಿದೆ.

ಕೋರಿಯರ್ ನಿವಾಸಿ ಚೋಮ (ಪ್ರಾಯ ಇನ್ನು ಅಧಿಕೃತವಾಗಬೇಕಿದೆ) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಬೆಂಗಳೂರು-ಮಂಗಳೂರು ರೈಲು ಮಾರ್ಗದ ಕೋರಿಯರ್ ಮೇಲ್ಸೇತುವೆಯ ಕೆಳಭಾಗದ ಹಳಿಯ ಮೇಲೆ ಮೃತದೇಹ ಪತ್ತೆಯಾಗಿದೆ. ಮುಂಜಾನೆ ಹಳಿಯ ಪಕ್ಕದಲ್ಲಿ ಶವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಕಡಬ ಪೊಲೀಸರು ಹಾಗೂ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಚೋಮ ಅವರು ಮುಂಜಾನೆ ರೈಲು ಹಳಿ ದಾಟುವಾಗ ಆಕಸ್ಮಿಕವಾಗಿ ರೈಲು ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆಯೇ? ಅಥವಾ ಇದರ ಹಿಂದೆ ಬೇರೆ ಏನಾದರೂ ಕಾರಣಗಳಿವೆಯೇ ಎಂಬ ಬಗ್ಗೆ ಸ್ಥಳೀಯ ವಲಯದಲ್ಲಿ ತೀವ್ರ ಗೊಂದಲ ಹಾಗೂ ಅನುಮಾನಗಳು ವ್ಯಕ್ತವಾಗಿವೆ. ಸದ್ಯಕ್ಕೆ ಇದು ಅಪಘಾತದಂತೆ ಮೇಲ್ನೋಟಕ್ಕೆ ಕಂಡುಬಂದರೂ, ಸಾವಿನ ನಿಖರ ಕಾರಣದ ಬಗ್ಗೆ ತನಿಖೆ ನಡೆಯಬೇಕಿದೆ.