ನವದೆಹಲಿ: ಬೆಂಗಳೂರಿನಿಂದ (Bengaluru) ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ (Air India) ವಿಮಾನವೊಂದರ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಶಂಕೆಯ ಹಿನ್ನೆಲೆಯಲ್ಲಿ, ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ (IGI) ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ಭಾರಿ ಆತಂಕ ಸೃಷ್ಟಿಯಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ‘ಸಂಪೂರ್ಣ ತುರ್ತು ಪರಿಸ್ಥಿತಿ’ ಘೋಷಿಸಿ ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುರುವಾರ ರಾತ್ರಿ ಸುಮಾರು 9:30 ರ ವೇಳೆಗೆ ಏರ್ ಇಂಡಿಯಾದ AI 2802 ವಿಮಾನವು ದೆಹಲಿ(Delhi) ತಲುಪುತ್ತಿದ್ದಂತೆ ಅದರ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಹಾಗೂ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಯಿತು. ತಕ್ಷಣವೇ ಪೈಲಟ್‌ಗಳು ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ATC) ಗೆ ಮಾಹಿತಿ ರವಾನಿಸಿದರು.

ಪರಿಸ್ಥಿತಿಯ ಗಂಭೀರತೆಯನ್ನು ಅರಿತು ರನ್‌ವೇಯ ಸುತ್ತ ಅಗ್ನಿಶಾಮಕ ವಾಹನ ಹಾಗೂ ಆಂಬ್ಯುಲೆನ್ಸ್‌ಗಳನ್ನು ಸನ್ನದ್ಧವಾಗಿಡಲಾಗಿತ್ತು. ಬಳಿಕ ವಿಮಾನವನ್ನು ದೆಹಲಿ ವಿಮಾನ ನಿಲ್ದಾಣದ ರನ್‌ವೇ 29R ನಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.

ಸದ್ಯ ವಿಮಾನವನ್ನು ರನ್‌ವೇಯಿಂದ ಸುರಕ್ಷಿತ ವಲಯಕ್ಕೆ ಎಳೆದುಕೊಂಡು ಹೋಗಲಾಗಿದ್ದು (Towed) ಪರಿಶೀಲನೆ ನಡೆಸಲಾಗುತ್ತಿದೆ. ವಿಮಾನದಲ್ಲಿದ್ದ ಎಲ್ಲಾ 171 ಪ್ರಯಾಣಿಕರು ಹಾಗೂ ಸಿಬ್ಬಂದಿ ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ. ವಿಮಾನ ರನ್ ವೇ 29R ನಲ್ಲಿ 40 ನಿಮಿಷಗಳ ಕಾಲ ನಿಂತಿತ್ತು ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ.