ಚೆನ್ನೈ: ಡಿಎಂಕೆ ಆಕ್ರೋಶದ ಬೆನ್ನಲ್ಲೇ ತಮಿಳುನಾಡಿನ (Tamilnadu) ಮುಖ್ಯಮಂತ್ರಿ ವಿಜಯ್ (CM Vijay) ಅವರು ನೀಡಿದ್ದ ಟೆಂಡರ್‌ವೊಂದನ್ನು ಇದೀಗ ರದ್ದುಗೊಳಿಸಿದ್ದಾರೆ.

ಸಿಎಂ ವಿಜಯ್ ಅವರು ತೂತುಕುಡಿ ಜಿಲ್ಲೆಯ ಹಳ್ಳಿಯೊಂದರಲ್ಲಿ 3,000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಕಟ್ಟಲು ನೀಡಿದ್ದ 16.83 ಲಕ್ಷ ರೂ. ಮೌಲ್ಯದ ಸರ್ಕಾರಿ ಟೆಂಡರ್‌ನ್ನು ಓಪನ್‌ ಮಾಡಿದ ಆರು ಗಂಟೆಯಲ್ಲೇ ಕ್ಲೋಸ್‌ ಮಾಡಿದ್ದರು. ಈ ಹಿನ್ನೆಲೆ ಸ್ಥಳೀಯರಿಂದ ಹಾಗೂ ವಿರೋಧ ಪಕ್ಷದಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸರ್ಕಾರ ನೀಡಿದ್ದ ಟೆಂಡರ್‌ನ್ನು ರದ್ದುಗೊಳಿಸಿದೆ.

ನಿಯಮಗಳ ಪ್ರಕಾರ, ಮೇ 13ರಿಂದಲೇ ಟೆಂಡರ್ ವಿವರಗಳು ಗುತ್ತಿಗೆದಾರರಿಗೆ ಸಿಗಬೇಕಾಗಿತ್ತು. ಆದರೆ, ಮೇ 18ರಂದು ಬೆಳಗ್ಗೆ 9 ಗಂಟೆಗೆ ಟೆಂಡರ್ ಓಪನ್‌ ಮಾಡಿ, ಕೇವಲ ಆರು ಗಂಟೆ ಸಮಯಾವಕಾಶ ನೀಡಿ ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ಟೆಂಡರ್ ಕ್ಲೋಸ್ ಮಾಡಿದ್ದರು. ಬಳಿಕ ಮಾರನೇ ದಿನ ಮಧ್ಯಾಹ್ನ 4 ಗಂಟೆಗೆ ಟೆಂಡರ್ ಅನ್ನು ಒಬ್ಬರಿಗೆ ವಹಿಸಿಕೊಟ್ಟರು. ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಟೆಂಡರ್ ಅನ್ನು ರದ್ದುಗೊಳಿಸಿದ್ದಾರೆ. ಜೊತೆಗೆ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿ, ಅಕ್ರಮ ಎಸಗಿದ ಆರೋಪದ ಮೇಲೆ ಇಬ್ಬರು ಅಧಿಕಾರಿಗಳನ್ನು ತನಿಖೆ ಮುಗಿಯುವವರೆಗೆ ಅಮಾನತು ಮಾಡಿದ್ದಾರೆ.