


ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರಿಂದು 94ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್‌ಡಿಸಿ ಪುತ್ರರೂ ಆಗಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಶುಭಾಶಯ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಎಕ್ಸ್’ಖಾತೆಯಲ್ಲಿ ಹೆಚ್.ಡಿ ದೇವೇಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ಹೆಚ್.ಡಿ ದೇವೇಗೌಡ ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸಾರ್ವಜನಿಕ ಜೀವನದಲ್ಲಿ ತಮ್ಮ ದೀರ್ಘಕಾಲದ ಸೇವೆಯ ಮೂಲಕ ಅವರು ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನೀತಿ ಸಂಬಂಧಿತ ವಿಷಯಗಳ ಬಗ್ಗೆ ಅವರ ಆಳವಾದ ಅರಿವು ಮತ್ತು ಹಿಂದುಳಿದವರ ಸೇವೆಯ ಮೇಲಿನ ಬದ್ಧತೆ ಎಲ್ಲರಿಗೂ ಪರಿಚಿತವಾಗಿದೆ. ಅವರು ದೀರ್ಘಾಯುಷಿ ಹಾಗೂ ಆರೋಗ್ಯವಂತರಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಳ್ಳುವ ಮೂಲಕ ವಿಶೇಷವಾಗಿ ಶುಭಹಾರೈಸಿದ್ದಾರೆ.ಹುಟ್ಟುಹಬ್ಬದ ಅಂಗವಾಗಿ ದೇವೇಗೌಡರು, ಬೆಳ್ಳಂಬೆಳಗ್ಗೆಯೇ ಜೆ.ಪಿ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ಕುಟುಂಬ ಸದಸ್ಯರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ದೇವೆಗೌಡರ ಮೊಮ್ಮಕ್ಕಳು ಅವರಿಗೆ ಪ್ರೀತಿಯ ಅಪ್ಪುಗೆ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು. 11 ಘಂಟೆ ನಂತರ ಅವರು ಸಾರ್ವಜನಿಕರು ಹಾಗೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.


ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು, ಬೆಳಗ್ಗೆ ವೆಂಕಟೇಶ್ವರ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿದ್ದೇನೆ. ಕಳೆದ ಐದು ವರ್ಷಗಳಿಂದ ಪ್ರತಿ ಮಂಗಳವಾರ ನನ್ನ ಆರೋಗ್ಯಕ್ಕಾಗಿಯೇ ಪೂಜೆ ಮಾಡುತ್ತಾರೆ. ಡಯಾಲಿಸಿಸ್ ಇದ್ದ ಕಾರಣ ತಿರುಪತಿಗೆ ಹೋಗಲು ಆಗಲಿಲ್ಲ. ಹೀಗಾಗಿ ಇಲ್ಲೇ ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ನನ್ನ ಕೈಲಾದ ಮಟ್ಟಿಗೆ ರಾಜ್ಯದ ಜನತೆಗೆ ಕೆಲಸ ಮಾಡುತ್ತೇನೆ. ಇನ್ನೂ ಕೆಲವು ದಿನ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವ ದೃಢ ಸಂಕಲ್ಪ ಮಾಡಿದ್ದೇನೆ. ನನಗೆ 93 ಆಯಿತು ಅಂತ ಮನೆಯಲ್ಲಿ ಕೂತುಕೊಳ್ಳುವುದಿಲ್ಲ. ವ್ಹೀಲ್‌ಚೇರ್‌ನಲ್ಲೇ ಓಡಾಡುತ್ತೇನೆ. ಜನರ ಸಮಸ್ಯೆಗಳು ತುಂಬಾ ಹದಗೆಟ್ಟಿವೆ. ಮೇ 20 ರಂದು ಮತ್ತೆ ಸುದ್ದಿಗೋಷ್ಠಿ ನಡೆಸಿ ರಾಜ್ಯ ಹಾಗೂ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇನೆ ಎಂದರು.
