


ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗೇರು (Cashew) ಅಥವಾ ಗೋಡಂಬಿ ಬೆಳೆಯಲು ವಿಫುಲ್ಲ ಅವಕಾಶವಿದ್ದು, ಗೇರು ಅಭಿವೃದ್ಧಿ ನಿಗಮದ ವತಿಯಿಂದ ಗುಣಮಟ್ಟದ ಗೋಡಂಬಿ ಸಸಿಗಳನ್ನ ಬೆಳೆಸಿ, ರೈತರಿಗೆ ನೀಡಲಾಗುವುದು. ಇದಕ್ಕಾಗಿ 1 ಕೋಟಿ ರೂ. ಅನುದಾನ ನೀಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ (Eshwar Khandre) ಭರವಸೆ ನೀಡಿದರು.
ಗೇರು ಅಭಿವೃದ್ಧಿ ಮಂಡಳಿ ವತಿಯಿಂದ ಮಂಗಳೂರಿನಲ್ಲಿ (Mangaluru) ಆಯೋಜಿಸಿರುವ ಗೇರು ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಂಡೋಸಲ್ಫಾನ್ ಅನಾಹುತದ ಬಳಿಕ ಹಲವು ರೈತರು ಗೇರು ಬೆಳೆಯುವುದರಿಂದಲೇ ವಿಮುಖರಾಗಿದ್ದಾರೆ. ಇವರಿಗೆ ಮತ್ತೆ ಉತ್ತೇಜನ ನೀಡಿ ಗತವೈಭವ ಮರಳುವಂತೆ ಮಾಡಲು ಕ್ರಮ ವಹಿಸಲಾಗುವುದು ಎಂದರು.


ಆಸಕ್ತ ರೈತರಿಗೆ ಸಸಿಗಳನ್ನು ನಿಗಮದ ನರ್ಸರಿಗಳಲ್ಲಿಯೇ ಬೆಳೆಸಿ, ಪೂರೈಸುವುದು ಸೂಕ್ತ ಎಂದು ಪರಿಗಣಿಸಿ, ಈ ವರ್ಷದಿಂದಲೇ ಕಸಿ ಮಾಡಿದ ಗೋಡಂಬಿ ಸಸಿ ಬೆಳೆಸಲು ಸೂಚನೆ ನೀಡಲಾಗಿದೆ. ಇದಕ್ಕಾಗಿ 1 ಕೋಟಿ ರೂ. ಅನುದಾನ ನೀಡಲಾಗುವುದು. 1 ಕೋಟಿ ರೂ. ವೆಚ್ಚದಲ್ಲಿ ಸಸಿಗಳನ್ನ ಬೆಳೆಸಿ ಮುಂದಿನ ವರ್ಷದಿಂದ ಸಬ್ಸಿಡಿ ದರದಲ್ಲಿ ರೈತರಿಗೆ ಈ ಸಸಿಗಳನ್ನ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು
