


ತಮಿಳುನಾಡು ಸಿಎಂ ವಿಜಯ್ ವಿಶೇಷ ಅನುಮತಿಯಿದ್ದರೂ ಕೊನೆ ಕ್ಷಣದಲ್ಲಿ ತ್ರಿಶಾ, ಸೂಯ ಅಭಿನಯದ ‘ಕರುಪ್ಪ್’ (Karuppu) ಫಸ್ಟ್ ಶೋಗಳು ರದ್ದಾಗಿವೆ.
ಸೂರ್ಯ ಮತ್ತು ತ್ರಿಶಾ ಅಭಿನಯದ ‘ಕರುಪ್ಪ್’ ಸಿನಿಮಾಗೆ ತಮಿಳುನಾಡಿನಲ್ಲಿ (Tamilnadu) ಬೆಳಗಿನ ಶೋಗೆ ವಿಶೇಷ ಅನುಮತಿ ನೀಡಲಾಗಿತ್ತು. ಆದರೆ ಏಕಾಏಕಿ ಕೊನೆಕ್ಷಣದಲ್ಲಿ ಬೆಳಗಿನ ಜಾವದ ಶೋಗಳು ರದ್ದಾಗಿವೆ.


ಈ ಕುರಿತು ಬುಧವಾರ (ಮೇ 13) ರಾತ್ರಿ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಸಂಸ್ಥೆಯ ಸಹ-ಮಾಲೀಕ ಹಾಗೂ ನಿರ್ಮಾಪಕ ಎಸ್.ಆರ್.ಪ್ರಭು ಅವರು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅನಿವಾರ್ಯ ಕಾರಣಗಳಿಂದಾಗಿ 9 ಗಂಟೆಯ ಶೋಗಳನ್ನು ರದ್ದುಗೊಳಿಸಲಾಗಿದೆ ಎಂದು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಜೊತೆಗೆ ವಿಷ್ಣು ಕಮಲ್ ಅವರು, ನಿರ್ಮಾಪಕರ ಕಡೆಯಿಂದ ಉಂಟಾದ ಹಣಕಾಸಿನ ತೊಂದರೆಗಳಿಂದಾಗಿ ಬೆಳಿಗ್ಗೆ 9:00 ಮತ್ತು 9:30ರ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ. ಟಿಕೆಟ್ ಕಾಯ್ದಿರಿಸಿದವರಿಗೆ ಹಣ ಮರುಪಾವತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಮಧ್ಯಾಹ್ನದ ಶೋಗಳೂ ಸಹ ರದ್ದಾಗಿದ್ದು, ಸಿನಿಮಾ ಸಂಜೆಯಿಂದಷ್ಟೇ ಪ್ರದರ್ಶನಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
‘ಕರುಪ್ಪ್’ ನಿರ್ದೇಶಕ ಆರ್.ಜೆ. ಬಾಲಾಜಿ ಪ್ರತಿಕ್ರಿಯಿಸಿ, ನಿರ್ಮಾಪಕರು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ 32 ತಿಂಗಳುಗಳಿಂದ ಈ ಚಿತ್ರವು ಹಲವು ಅಡೆತಡೆಗಳನ್ನು ಎದುರಿಸಿದೆ. ಈ ಸಮಸ್ಯೆಯಿಂದಲೂ ಆದಷ್ಟು ಬೇಗ ದೇವರು ನಮ್ಮನ್ನು ಪಾರು ಮಾಡುತ್ತಾನೆ ಎಂದು ಬರೆದುಕೊಂಡಿದ್ದಾರೆ.
