ಚೆನ್ನೈ: ಜೋಸೆಫ್ ವಿಜಯ್ (Joseph Vijay) ನೇತೃತ್ವದ ತಮಿಳುನಾಡು ಸರ್ಕಾರ (Tamilnadu Govt) ರಾಜ್ಯದಲ್ಲಿ ಮದ್ಯಪಾನದ ನಿಯಮಗಳನ್ನು ಕಠಿಣಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಮದ್ಯ ಖರೀದಿ ಅಥವಾ ಮಾರಾಟ ಮಾಡಲು ಕನಿಷ್ಠ 21 ವರ್ಷ ನಿಗದಿಪಡಿಸಿ ಮಹತ್ವದ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ವಿಜಯ್ ಸರ್ಕಾರ ಈ ಕ್ರಮ ಜಾರಿಗೆ ತಂದಿದೆ. ರಾಜ್ಯದಲ್ಲಿ ಮದ್ಯಪಾನ ನಿಯಂತ್ರಣ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈಗಾಗಲೇ ದೇವಾಲಯಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಬಸ್ ನಿಲ್ದಾಣಗಳ ಸಮೀಪದಲ್ಲಿದ್ದ 717 TASMAC ಮದ್ಯದಂಗಡಿಗಳನ್ನು ಮುಚ್ಚಲು ಸರ್ಕಾರ ಆದೇಶಿಸಿದ ಬೆನ್ನಲ್ಲೇ ಮತ್ತೊಂದು ಕ್ರಮವನ್ನು ಕೈಗೊಂಡಿದೆ.

ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮ (TASMAC ) ಅಂಗಡಿಗಳ ಸಿಬ್ಬಂದಿಗೆ ಗ್ರಾಹಕರ ವಯಸ್ಸನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ. ಅನುಮಾನ ಬಂದಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಗುರುತಿನ ಚೀಟಿಗಳನ್ನು ಪರಿಶೀಲಿಸಿ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡಬಾರದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.