ಬೆಂಗಳೂರು: ಮೇ 3, 2026ರಂದು ನಡೆದ NEET UG 2026 ಪರೀಕ್ಷೆ ರದ್ದುಗೊಂಡ ಬಳಿಕ ದೇಶಾದ್ಯಂತ ಪರೀಕ್ಷೆ ಕಟ್ಟಿದ್ದ 22.79 ಲಕ್ಷ ವೈದ್ಯಕೀಯ ಆಕಾಂಕ್ಷಿಗಳ ಎದೆ ಝಲ್ ಎಂದಿತ್ತು. “ಮತ್ತೆ ಹೊಸದಾಗಿ ಅರ್ಜಿ ತುಂಬಬೇಕಾ? ಮತ್ತೆ ಹಣ ಕಟ್ಟಬೇಕಾ?” ಎಂಬ ಪ್ರಶ್ನೆ (Question) ಎಲ್ಲರ ಮನಸಲ್ಲೂ ಮತ್ತೆ ವಿಷಾದಕ್ಕೆ ಕಾರಣವಾಗಿತ್ತು. ಆದರೆ ಮೇ 12, 2026ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿದ ಅಧಿಕೃತ ಪ್ರಕಟಣೆ ಆ ಎಲ್ಲ ಆತಂಕಗಳನ್ನು ಒಂದೇ ಏಟಿಗೆ ದೂರ ಮಾಡಿದೆ.

ಮಹತ್ವದ ತೀರ್ಮಾನ; ಅದೊಂದೇ ಬದಲಾವಣೆ

NTA neet.nta.nic.in ಮತ್ತು nta.ac.in ವೆಬ್‌ಸೈಟ್‌ಗಳಲ್ಲಿ ಅಧಿಕೃತ ಪ್ರೆಸ್ ನೋಟ್ ಮತ್ತು ಸಾರ್ವಜನಿಕ ಸೂಚನೆ ಹೊರಡಿಸಿ ಸ್ಪಷ್ಟಪಡಿಸಿದೆ. NEET 2026 ಮರು-ಪರೀಕ್ಷೆಗೆ ಹೊಸ ನೋಂದಣಿ ಅಗತ್ಯವೇ ಇಲ್ಲ. ಫೆಬ್ರವರಿ 8, 2026ರಂದು ಆರಂಭವಾಗಿ ಮಾರ್ಚ್ 11, 2026ರಂದು ಮುಕ್ತಾಯವಾದ ನೋಂದಣಿ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಸಲ್ಲಿಸಿದ ಎಲ್ಲ ವಿವರಗಳು, ಅರ್ಜಿ ಮಾಹಿತಿ, ಪರೀಕ್ಷಾ ಕೇಂದ್ರ ಆಯ್ಕೆ, ವೈಯಕ್ತಿಕ ದಾಖಲೆಗಳು ಮರು-ಪರೀಕ್ಷೆಗೂ ಯಥಾವತ್ತಾಗಿ ಮಾನ್ಯವಿರುತ್ತವೆ. ಇಷ್ಟರ ನಡುವೆ ಪರೀಕ್ಷಾ ಪ್ರವೇಶ ಪತ್ರ ಮಾತ್ರ ಹೊಸದಾಗಿ ಕೊಡಲಾಗುತ್ತದೆ ಅಷ್ಟೇ!

ಸ್ವಂತ ಖರ್ಚಿನಲ್ಲಿ ಪರೀಕ್ಷೆ ನಡೆಸಲು ಮುಂದಾದ NTA

ಈ ನಿರ್ಧಾರ ಕೇವಲ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಮೇ 2026ರಲ್ಲಿ ನೋಂದಾಯಿಸಿ ಈ ಕಾರಣಕ್ಕೆ ಪರೀಕ್ಷೆ ಬರೆಯಲಾಗದ ಎಲ್ಲ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ. ಹೆಚ್ಚುವರಿ ಶುಲ್ಕ ಸಂಪೂರ್ಣ ಶೂನ್ಯ ಎಂದು ಇಲಾಖೆ ಘೋಷಿಸಿದ್ದು ಮರು-ಪರೀಕ್ಷೆಯನ್ನು NTA ತನ್ನ ಸ್ವಂತ ಖರ್ಚಿನಲ್ಲಿ ನಡೆಸಲಿದೆ.

ರಿಫಂಡ್‌ ಖಂಡಿತ, ಆದರೆ ದಿನಾಂಕ ನಿಗದಿಯಾಗಿಲ್ಲ

ಮತ್ತೊಂದು ಮಹತ್ವದ ಸಂಗತಿ ಏನೆಂದರೆ ಈಗಾಗಲೇ ರದ್ದಾದ ಮೇ 3ರ ಪರೀಕ್ಷೆಗೆ ವಿದ್ಯಾರ್ಥಿಗಳು ಪಾವತಿಸಿದ ನೋಂದಣಿ ಶುಲ್ಕ ಮರುಪಾವತಿ ಆಗಲಿದೆ. ಆದರೆ ರಿಫಂಡ್‌ನ ನಿಖರ ದಿನಾಂಕ ಮತ್ತು ಪ್ರಕ್ರಿಯೆಯ ವಿವರಗಳನ್ನು NTA ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ ಎಂದು ತಿಳಿಸಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಒಂದು ಕಟ್ಟುನಿಟ್ಟಿನ ಎಚ್ಚರಿಕೆ ಯಾವುದೇ ಕೋಚಿಂಗ್ ಸಂಸ್ಥೆ ಅಥವಾ ಮೂರನೇ ವ್ಯಕ್ತಿ “ಮರು-ನೋಂದಣಿ ಮಾಡಿಸಿಕೊಡುತ್ತೇವೆ” ಎಂದು ಹಣ ಕೇಳಿದರೆ ಅದು ಸಂಪೂರ್ಣ ಮೋಸ.