ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ದರ್ಶನ ಸಮಯ ಪರಿಷ್ಕರಣೆ, ಈಗ 6.30 ರಿಂದ 2.00 ಮತ್ತು 3.00 ರಿಂದ 8.30ರವರೆಗೆ ನಿರಂತರ ದರ್ಶನ, ಭಕ್ತರಿಗೆ ಹೆಚ್ಚುವರಿ ಒಂದು ಗಂಟೆ ಅವಕಾಶ

ದಕ್ಷಿಣ ಕನ್ನಡ: ರಾಜ್ಯದ ಅತೀ ಶ್ರೀಮಂತ ಮತ್ತು ಹೆಸರಾಂತ ನಾಗಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ದೇವರ (God) ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಭಕ್ತರಿಗೆ ಹೆಚ್ಚಿನ ಸಮಯದ ದರ್ಶನ ಸೌಲಭ್ಯ ಕಲ್ಪಿಸಲಾಗಿದೆ. ಈ ಮೊದಲು ಮಧ್ಯಾಹ್ನ 1.30ರಿಂದ 3.30ರವರೆಗೆ ದರ್ಶನ ಸ್ಥಗಿತಗೊಳ್ಳುತ್ತಿದ್ದರೂ, ಇದೀಗ ಆಡಳಿತ ಮಂಡಳಿಯ ನಿರ್ಣಯದಂತೆ 2.00ರಿಂದ 3.00ರವರೆಗೆ ಮಾತ್ರ ದರ್ಶನ ಬಂದ್ ಇರಲಿದೆ. ಇದರಿಂದ ಭಕ್ತರಿಗೆ ಹೆಚ್ಚುವರಿ ಒಂದು ಗಂಟೆ ದೇವರ ದರ್ಶನಕ್ಕೆ ಅವಕಾಶ ದೊರೆಯಲಿದೆ.

ನಿರಂತರ ದರ್ಶನ ವ್ಯವಸ್ಥೆ

ಹೊಸ ವ್ಯವಸ್ಥೆಯಂತೆ ಬೆಳಗ್ಗೆ 6.30 ರಿಂದ ಮಧ್ಯಾಹ್ನ 2.00 ರವರೆಗೆ ಹಾಗೂ ಅಪರಾಹ್ನ 3.00 ರಿಂದ ರಾತ್ರಿ 8.30 ರವರೆಗೆ ನಿರಂತರ ದರ್ಶನ ವ್ಯವಸ್ಥೆ ಇರಲಿದೆ. ಮಹಾಮಂಗಳಾರತಿಯ ಸಮಯದಲ್ಲಿ ಮಾತ್ರ ಹಿಂದಿನಂತೆ ಅಲ್ಪಕಾಲ ದರ್ಶನ ಸ್ಥಗಿತಗೊಳ್ಳಲಿದೆ. ಈ ಪರಿಷ್ಕøತ ದರ್ಶನ ವ್ಯವಸ್ಥೆ ಮೇ 10 ರಿಂದಲೇ ಜಾರಿಗೆ ಬಂದಿರುವುದಾಗಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ತಿಳಿಸಿದ್ದಾರೆ.