


ಮಂಗಳೂರು ನಗರದ ಹೊರವಲಯದ ಮಳವೂರು ಕೆಂಜಾರ್ ವ್ಯಾಪ್ತಿಯಲ್ಲಿ ಹರಿಯುವ ಪಲ್ಗುಣಿ ನದಿ ಈಗ ಸ್ಮಶಾನದಂತಾಗಿದೆ. ಇದಕ್ಕೆ ಕಾರಣ ಇಲ್ಲಿನ ಕೈಗಾರಿಕೆಗಳಿಂದ ಹರಿದು ಬರುತ್ತಿರುವ ವಿಷಕಾರಿ ತ್ಯಾಜ್ಯ ಅನ್ನೋದು ಸ್ಥಳೀಯರ ನೇರ ಆರೋಪವಾಗಿದೆ.
ಕೈಗಾರಿಕೆಗಳ ಕಲುಷಿತ ನೀರೇ ಮೀನುಗಳ ಪಾಲಿಗೆ ವಿಷಕಾರಿಯಾಗಿ ಪರಿಣಮಿಸಿದೆ. ಪ್ರತಿ ಬೇಸಿಗೆಯಲ್ಲಿ ಈ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ಇಲ್ಲಿ ಜನರು ಮೂಗು ಮುಚ್ಚಿ ಓಡಾಡುವಂಥ ಪರಿಸ್ಥಿತಿ ಇದೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ ಅನ್ನೋದು ಪರಿಸರ ಪ್ರೇಮಿಗಳ ಆಕ್ರೋಶ.



ಇಂಡಸ್ಟ್ರಿಗಳ ನೀರನ್ನು ಯಾವುದೇ ಕಾರಣಕ್ಕೂ ನದಿಗೆ ಬಿಡಬಾರದು. ಬಾವಿ ನೀರನ್ನು ಕುಡಿಯಲಯ ಆಗುತ್ತಿಲ್ಲ. ನದಿ ಬಳಿ ಬಂದರೇ ವಾಸನೆ ಬರ್ತಿದೆ. ಇದರ ವಿರುದ್ಧ ಗಂಭೀರ ಹೋರಾಟ ಮಾಡುವ ನಿರ್ಧಾರ ಮಾಡಿದ್ದೇವೆ ಎಂದು ಸ್ಥಳೀಯರಾದ ಫ್ರಾಂಕಿ ಡಿಸೋಜಾ ತಿಳಿಸಿದ್ದಾರೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ
ನದಿ ನೀರು ಪೂರ್ತಿ ಕಪ್ಪಾಗಿದ್ದು, ನದಿ ಪಾತ್ರದ ಮನೆಗಳ ಬಾವಿನೀರು ಕೂಡ ಕಲುಷಿತ ಗೊಂಡಿದೆ. ಇದು ಕೇವಲ ಮಳವೂರು ಭಾಗದ ಕಥೆಯಲ್ಲ, ಬಜಪೆ ಪಂಚಾಯತ್ ವ್ಯಾಪ್ತಿಯ ನದಿ ಮೂಲಗಳು ಮಾಲಿನ್ಯದ ಸುಳಿಗೆ ಸಿಲುಕಿವೆ. ಹೀಗಾಗಿ ಈ ವಿಷಯವನ್ನ ಪಂಚಾಯತ್ ಗಂಭೀರವಾಗಿ ಪರಿಗಣಿಸಿದ್ದು, ಹೋರಾಟದ ಎಚ್ಚರಿಕೆ ನೀಡಿದೆ. ಇನ್ನು ಘಟನೆ ತಿಳಿಯುತ್ತಿದ್ದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ.ಮಹೇಶ್ವರಿ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಚ್ಚನಾಡಿ ಎಸ್.ಟಿ.ಪಿ ಪ್ಲಾಂಟ್‌ನಿಂದ ಸಂಸ್ಕರಿಸದ ತ್ಯಾಜ್ಯ ನೀರನ್ನ ನೇರವಾಗಿ ನದಿಗೆ ಬಿಡಲಾಗ್ತಿದ್ಯ ಅನ್ನೋ ಸಂಶಯ ವ್ಯಕ್ತವಾಗಿದೆ. ಅಧಿಕಾರಿಗಳು ನದಿ ಮತ್ತು ಬಾವಿ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಮುಂದಾಗಿದ್ದಾರೆ.
