ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವ ಹಾದಿಯಲ್ಲಿ, ಸುಳ್ಯ ವಿಧಾನಸಭಾ ಕ್ಷೇತ್ರದ ಮರ್ದಾಳದಲ್ಲಿ ಅವರಿಗೆ ಅಭೂತಪೂರ್ವ ಸ್ವಾಗತ ಕೋರಲಾಯಿತು.

ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಈ ಭಾಗಕ್ಕೆ ಭೇಟಿ ನೀಡುತ್ತಿರುವ ವಿಜಯೇಂದ್ರ ಅವರನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ಭಾಗೀರಥಿ ಮುರುಳ್ಯ ಅವರು ಪುಷ್ಪಗುಚ್ಛ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಮರ್ದಾಳ ಜಂಕ್ಷನ್‌ನಲ್ಲಿ ಜಮಾಯಿಸಿದ್ದ ನೂರಾರು ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ, ತಮ್ಮ ನಾಯಕನನ್ನು ಸ್ವಾಗತಿಸಿದರು.

ಸುಬ್ರಹ್ಮಣ್ಯಕ್ಕೆ ಆಗಮಿಸಿದ ರಾಜ್ಯಾಧ್ಯಕ್ಷರನ್ನು ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ ಅವರು ಹೂಗುಚ್ಛ ನೀಡಿ, ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪಕ್ಷದ ಸಂಘಟನೆ ಹಾಗೂ ಸ್ಥಳೀಯ ರಾಜಕೀಯ ವಿದ್ಯಮಾನಗಳ ಕುರಿತು ಸಂಕ್ಷಿಪ್ತ ಚರ್ಚೆ ನಡೆಯಿತು.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ಭಾಗೀರಥಿ ಮುರುಳ್ಯ ಹಾಗೂ ಮಾಜಿ ಸಚಿವರಾದ ಎಸ್. ಅಂಗಾರ ಅವರು ಉಪಸ್ಥಿತರಿದ್ದು ವಿಜಯೇಂದ್ರ ಅವರನ್ನು ಸ್ವಾಗತಿಸಿದರು. ಸ್ವಾಗತದ ಬಳಿಕ ಮಾತನಾಡಿದ ಬಿ.ವೈ. ವಿಜಯೇಂದ್ರ ಅವರು, ಕುಕ್ಕೆ ಸುಬ್ರಹ್ಮಣ್ಯದಂತಹ ಪುಣ್ಯಕ್ಷೇತ್ರದಲ್ಲಿ ಕಾರ್ಯಕರ್ತರ ಪ್ರೀತಿ ಕಂಡು ಸಂತಸವಾಗಿದೆ. ಸುಳ್ಯ ಮಂಡಲವು ಪಕ್ಷದ ಶಕ್ತಿಯ ಕೇಂದ್ರವಾಗಿದ್ದು, ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ಮಂಡಲ ಅಧ್ಯಕ್ಷರಿಗೆ ಹಾಗೂ ನಾಯಕರಿಗೆ ಸೂಚನೆ ನೀಡಿದರು.

ಕುಕ್ಕೆ ಸುಬ್ರಹ್ಮಣ್ಯದ ಪರಿಸರದಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಜೈಕಾರಗಳ ಮೂಲಕ ನಾಯಕನನ್ನು ಸ್ವಾಗತಿಸಿದ ಕಾರ್ಯಕರ್ತರೊಂದಿಗೆ ವಿಜಯೇಂದ್ರ ಅವರು ಕೆಲಹೊತ್ತು ಸಮಯ ಕಳೆದರು. ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ಮಂಡಲ ಮಟ್ಟದ ಪದಾಧಿಕಾರಿಗಳು, ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.