ನವದೆಹಲಿ: ಅಂದು ಕುಟುಂಬದೊಂದಿಗೆ ಪ್ರವಾಸದಲ್ಲಿದ್ದ 26 ಜೀವಗಳನ್ನು ಬಲಿ ಪಡೆದ ಉಗ್ರರಿಗೆ ತಕ್ಕ ಪಾಠ ಕಲಿಸಿದ ʻಆಪರೇಷನ್‌ ಸಿಂಧೂರʼಕ್ಕೆ ಇಂದು ವರ್ಷ.

ಹೌದು, 2025ರ ಏಪ್ರಿಲ್‌ 22ರಂದು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ ವ್ಯಾಲಿಯಲ್ಲಿ ಪ್ರವಾಸಿಗರು ಸುಂದರ ಕ್ಷಣಗಳನ್ನು ಕಳೆಯುತ್ತಿದ್ದರು. ಈ ವೇಳೆ ಏಕಾಏಕಿ ಉಗ್ರರು ಬಂದು ಅಲ್ಲಿದ್ದ ಜನರಿಗೆ ಧರ್ಮ, ಕಲಿಮಾ ಕೇಳಿ 26 ಹಿಂದೂಯೇತರರ ಮೇಲೆ ಗುಂಡಿನ ದಾಳಿ ನಡೆಸಿ, ರಕ್ತ ಹರಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ `ಆಪರೇಷನ್‌ ಸಿಂಧೂರʼ ಎಂಬ ಹೆಸರಿನಲ್ಲಿ ಮೇ 7, 8ರ ರಾತ್ರಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿತ್ತು. ಕೇವಲ 23 ನಿಮಿಷಗಳ ಕಾಲ ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆ ಪಾಕ್‌ನ 9 ಉಗ್ರನೆಲೆಗಳನ್ನು ಧ್ವಂಸಗೊಳಿಸಿತ್ತು.

ಪಾಕ್ ಉಗ್ರರು ನಡೆಸಿದ ಪಹಲ್ಗಾಮ್‌ ದಾಳಿಗೆ ಪ್ರತಿಯಾಗಿ ಮೊದಲು ಭಾರತ ರಾಜತಾಂತ್ರಿಕ ಸೇಡಿನ ಕ್ರಮ ಆರಂಭಿಸಿತ್ತು. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ಭಾರತ, ಉಭಯ ದೇಶಗಳ ನಡುವಿನ ಅಟಾರಿ-ವಾಘಾ ಗಡಿ ಮುಚ್ಚುವಿಕೆಯಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಆದರೆ ಈ ಕ್ರಮಗಳು ಸಾಲದು ಎಂಬ ಕೂಗು ಭಾರತದಲ್ಲಿ ಎದ್ದಿತ್ತು. ಆಗ ಅದಕ್ಕೆ ಪ್ರತಿಯಾಗಿ ಭಾರತ ನಡೆಸಿದ್ದೇ, ಕಂಡು ಕೇಳರಿಯದಂಥ ಅಚ್ಚರಿಯ ಕಾರ್ಯಾಚರಣೆ ʻಆಪರೇಷನ್‌ ಸಿಂಧೂರʼ

ಕೆಲ ದಿನಗಳ ಕಾಲ ಭಾರತೀಯ ಸೇನೆ ದಾಳಿ ಮುಂದುವರೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕ್‌ ಕೂಡ ದಾಳಿ ನಡೆಸಿತ್ತು. ಈ ವೇಳೆ ಪಾಕಿಸ್ತಾನದಲ್ಲಿರುವ ದೇಗುಲ, ಗುರುದ್ವಾರಗಳೂ ಧ್ವಂಸವಾಗಿದ್ದವು. ಭಾರತ ನಡೆಸಿದ ಬ್ರಹ್ಮೋಸ್‌ ಕ್ಷಿಪಣಿ ದಾಳಿಯಲ್ಲಿ ಪಾಕ್‌ ಸೇನಾನೆಲೆಗಳು ನಾಶಗೊಂಡಿದ್ದವು. ಅದಾದ ಬಳಿಕ ಮೇ 10 ಕದನ ವಿರಾಮ ಘೋಷಿಸಲಾಯಿತು.