ಚೆನ್ನೈ: ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆ ಮಾಡಲು ದಳಪತಿ ವಿಜಯ್‌ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷಕ್ಕೆ ಬೆಂಬಲ ನೀಡಲು ಕಾಂಗ್ರೆಸ್‌ ನಿರ್ಧರಿಸಿದೆ.

ಪಕ್ಷದ ಉನ್ನತ ಮೂಲಗಳ ಪ್ರಕಾರ, ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಸೆಲ್ವಪೆರುಂಥಗೈ ನೇತೃತ್ವದಲ್ಲಿ ಶಾಸಕರು ಮತ್ತು ಹೈಕಮಾಂಡ್ ಜೊತೆಗೆ ಮಂಗಳವಾರ ರಾತ್ರಿ ನಡೆದ ಸುಧೀರ್ಘ ಸಭೆಯ ಬಳಿಕ ಟಿವಿಕೆ ಬೆಂಬಲಿಸಲು ನಿರ್ಧರಿಸಲಾಗಿದೆ.

ಇದರಿಂದ ಟಿವಿಕೆಗೆ ಐವರು ಕಾಂಗ್ರೆಸ್‌ ಶಾಸಕರ ಬೆಂಬಲ ಸಿಕ್ಕಿದಂತಾಗಿದೆ. ಬಹುಮತ ಸಾಬೀತುಪಡಿಸಲು ಟಿವಿಕೆಗೆ ಇನ್ನೂ 5 ಸ್ಥಾನಗಳ ಅಗತ್ಯವಿದ್ದು, ಇಂದು ಸಂಜೆ ವೇಳೆ ನಿರ್ಧಾರವಾಗಲಿದೆ.

ವಿಜಯ್ ಕಾಂಗ್ರೆಸ್ ಬೆಂಬಲ ಕೋರಿದ್ದಾರೆ
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌, ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚಿಸಲು ಟಿವಿಕೆ ಮುಖ್ಯಸ್ಥ ಮತ್ತು ನಟ ವಿಜಯ್ ಕಾಂಗ್ರೆಸ್ ಬೆಂಬಲ ಕೋರಿದ್ದಾರೆ ಎಂದು ತಿಳಿಸಿದ್ದರು.