ವಿಜಯ್ ರಾಜಕೀಯ ಆರಂಭ ದೊಡ್ಡ ಐತಿಹಾಸಿಕ ಕ್ಷಣವಾಗಿ ಬದಲಾಗಿದೆ. ಸ್ಟಾರ್ ನಟನಾಗಿದ್ದ ಒಬ್ಬ ವ್ಯಕ್ತಿ ಸಿನಿಮಾ ಬಿಟ್ಟು ರಾಜಕೀಯ ಮಾಡುತ್ತೇನೆಂದು ಬಂದು ಪಕ್ಷ ಸ್ಥಾಪಿಸಿ, ಪ್ರಚಾರ ಮಾಡಿ ಒಂದೇ ಪ್ರಯತ್ನದಲ್ಲಿ ಅಧಿಕಾರಕ್ಕೆ ಬರೋದು ಅಂದ್ರೆ ಖಂಡಿತಾ ಸಣ್ಣ ವಿಚಾರವಲ್ಲ. ವಿಜಯ್ ಸಾಕಷ್ಟು ಅಡೆತಡೆಗಳನ್ನು ಮೀರಿ ಮುನ್ನುಗ್ಗಿದ್ದು ಅವರ ಪಾಲಿಟಿಕಲ್ ಜರ್ನಿ ವಿಶೇಷವಾಗಿದೆ.

ಮೊದಲ ಏಟು ಕರೂರು ಕಾಲ್ತುಳಿತ

ಆಗಷ್ಟೇ ಉತ್ಸಾಹದಿಂದ ಜನರನ್ನು ಸೇರಿಸಿ ಸಾರ್ವಜನಿಕ ಸಭೆ, ರ್ಯಾಲಿ, ಅಭಿಯಾನ ಅಂತ ಶುರು ಮಾಡಿದ್ದ ವಿಜಯ್​​ಗೆ ಕರೂರು ಕಾಲ್ತುಳಿತ ಮೊದಲ ಸವಾಲು. 40ಕ್ಕೂ ಹೆಚ್ಚು ಜನರ ದಾವಿಗೆ ಕಾರನವಾದ ಈ ಒಂದು ದುರಂತದಲ್ಲಿ ವಿಜಯ್ ಮೇಲೆ ಆರೋಪ ಮಾಡಲಾಗಿತ್ತು.ಅಷ್ಟೇ ಅಲ್ಲದೆ ವಿಜಯ್ ಅವರು ಈ ಕೇಸ್ ವಿಚಾರವಾಗಿ ದೆಹಲಿಗೆ ವಿಚಾರಗಳಿಗೂ ಹಾಜರಾಗಬೇಕಾಯಿತು. ಇದು ವಿಜಯ್​ಗೆ ಎಂದೂ ಫಾಲೋ ಮಾಡುತ್ತಲೇ ಇರಬೇಕಾದ ಕೇಸ್​ ಆಗಿ ಬದಲಾಗಿದ್ದು, ಅವರು ಸಾಕಷ್ಟು ಸಮಸ್ಯೆಯನ್ನು ಎದುರಿಸುವ ಹಾಗಾಯಿತು.

ರ್ಯಾಲಿಗಳಿಗೆ ತಡೆ

ವಿಜಯ್ ಅವರ ರ್ಯಾಲಿ, ಅಭಿಯಾನಗಳಿಗೆ ಅನುಮತಿ ಕೊಟ್ಟು ಕೊನೆಕ್ಷಣದಲ್ಲಿ ಅವುಗಳನ್ನು ಕ್ಯಾನ್ಸಲ್ ಮಾಡಲಾಯಿತು. ಇದು ಪ್ರಚಾರದ ಪ್ರಕ್ರಿಯೆಯಲ್ಲಿ ವಿಜಯ್​ಗೆ ಹಿನ್ನಡೆಯಾಗಿತ್ತು. ಪ್ರಚಾರ ಮಾಡುವಾಗ ವಿಶೇಷವಾಗಿ ಸೆಲೆಬ್ರಿಟಿಯಾಗಿರುವುದರಿಂದ ವಿಜಯ್ ಸಾಕಷ್ಟು ಕ್ರಮಗಳನ್ನು ಹೆಚ್ಚು ಫಾಲೋ ಮಾಡಲೇಬೇಕಾಯಿತು.

ಡಿವೋರ್ಸ್ ವಿವಾದ

ಇದರ ನಡುವೆ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರು ವಿಚ್ಛೇದನೆಗೆ ಅರ್ಜಿ ಸಲ್ಲಿಸಿದರು. ಇದು ದೊಡ್ಡ ವಿವಾದಕ್ಕೆ ಕಾರಣವಾಯಿತು. ತ್ರಿಶಾ ಜೊತೆಗಿನ ಸಂಬಂಧ ವಿಚಾರವಾಗಿ ನಟನನ್ನು ಟೀಕಿಸಲಾಯಿತು. ಸರಿಯಾದ ಕುಟುಂಬಸ್ಥನಾಗದೆ ಇವರು ರಾಜಕಾರಣಿಯಾಗಿ ಏನು ಮಾಡುತ್ತಾರೆ ಎನ್ನುವ ಚರ್ಚೆ ಶುರುವಾಯಿತು.

ಜನ ನಾಯಗನ್ ಹಿನ್ನಡೆ

ಜನ ನಾಯಗನ್ ಸಿನಿಮಾ ಜನವರಿ 9ರಂದು ರಿಲೀಸ್ ಆಗಬೇಕಾಗಿತ್ತು. ಆದರೆ ಸೆನ್ಸಾರ್ ಸಮಸ್ಯೆಗಳಿಂದಾಗಿ ಸಿನಿಮಾ ರಿಲೀಸ್ ಮಾಡೋಕೆ ಸಾಧ್ಯವಾಗಲಿಲ್ಲ. ಸಿನಿಮಾಗೆ ಒಂದರ ಮೇಲೊಂದರಂತೆ ಸಮಸ್ಯೆಗಳು ಬರುತ್ತಲೇ ಹೋದವು. ಹಾಗಾಗಿ ಇದು ನಿಗದಿತ ಸಮಯಕ್ಕೆ ರಿಲೀಸ್ ಆಗಲೂ ಇಲ್ಲ, ಬದಲಾಗಿ ಸಮಸ್ಯೆಗಳು, ನಷ್ಟಗಳೂ ಹೆಚ್ಚುತ್ತಾ ಹೋಯಿತು.

ಜನ ನಾಯಗನ್ ಲೀಕ್

ಚುನಾವಣೆ, ಡಿವೋರ್ಸ್, ವಿಚಾರಣೆ, ಪ್ರಚಾರ ಅಂತ ಸಾಕಷ್ಟು ಸಮಸ್ಯೆಗಳ ಮಧ್ಯೆ ಒದ್ದಾಡುತ್ತಿದ್ದ ವಿಜಯ್​​ಗೆ ಜನ ನಾಯಗನ್ ಸಿನಿಮಾ ಲೀಕ್ ಮತ್ತಷ್ಟು ಬಲವಾದ ಹೊಡೆತವಾಗಿತ್ತು. ಸಿನಿಮಾ ಥಿಯೇಟರ್​ಗೆ ಬರುವ ಮೊದಲೇ ಲೀಕ್ ಆಗಿ ನಿರ್ಮಾಣ ಸಂಸ್ಥೆಗೂ ನಷ್ಟವಾಯಿತು. ಇನ್ನು ದಳಪತಿಯ ಕೊನೆಯ ಸಿನಿಮಾ ಎನ್ನಲಾಗಿದ್ದ ಮೂವಿಗೆ ಈ ರೀತಿಯ ಹಿನ್ನಡೆ ತೀರಾ ಅನಿರೀಕ್ಷಿತವಾಗಿತ್ತು.

ಎಲ್ಲವನ್ನೂ ಮೀರಿ ನಿಂತ ವಿಜಯ್

ಹೀಗಿದ್ದರೂ ಕೂಡಾ ದಳಪತಿ ವಿಜಯ್ ಅವರ ಟಿವಿಕೆ ಗೆಲುವು ಭಾರೀ ದೊಡ್ಡಮಟ್ಟದ್ದಾಗಿದೆ. ಈ ರೀತಿ ವಿಜಯ್ ಅವರು ಗೆಲ್ಲಬಹುದು ಎಂದು ನಿರೀಕ್ಷೆ ಇರಲಿಲ್ಲ. ಆದರೆ ವಿಜಯ್ ಮಾತ್ರ ನಾವು ಬಹಳ ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ ಎಂದು ಪಕ್ಷದ ಸ್ಪರ್ಧಿಗಳಲ್ಲಿ ಹೇಳಿದ್ದರು. ಈಗ ಅದರಂತೆಯೇ ಟಿವಿಕೆ ಹೆಚ್ಚು ಮತಗಳ ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿದೆ.