ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಹಿನ್ನೆಲೆ ಮತ ಎಣಿಕೆಗೆ ಸ್ಟ್ರಾಂಗ್ ರೂಂ ಓಪನ್ ಮಾಡಲು ಅಧಿಕಾರಿಗಳು ಪರದಾಡಿದ ಪ್ರಸಂಗ ನಡೆಯಿತು.

ಮತ ಎಣಿಕೆ ಹಿನ್ನೆಲೆ ಜಿಲ್ಲಾಧಿಕಾರಿ ಜಿಎಂ ಗಂಗಾಧರಸ್ವಾಮಿ, ಚುನಾವಣಾಧಿಕಾರಿ ಸಂತೋಷ್ ಪಾಟೀಲ್ ಆಗಮಿಸಿದ್ದರು. 25 ಜನ ಅಭ್ಯರ್ಥಿಗಳು, ಏಜೆಂಟ್‌ಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯುವ ಕಾರ್ಯ ನಡೆಯಿತು. ಸ್ಟ್ರಾಂಗ್ ರೂಂ ಓಪನ್ ಮಾಡಲು ಸಿಬ್ಬಂದಿ ಗೊಂದಲಗೊಂಡರು. ‘ಸರಿಯಾಗಿ ಕೀ ಓಪನ್ ಮಾಡು’ ಎಂದು ಸಿಬ್ಬಂದಿಗೆ ಡಿಸಿ ಕ್ಲಾಸ್ ತೆಗೆದುಕೊಂಡರು. ಕೊನೆಗೆ ಈಟಿ, ಸುತ್ತಿಗೆಯಿಂದ ಬಾಗಿಲು ಒಡೆದು ಸ್ಟ್ರಾಂಗ್ ರೂಂ ಓಪನ್ ಮಾಡಿದರು. 

ಡಿಆರ್‌ಆರ್ ಶಾಲಾ ಆವರಣದಲ್ಲಿ ಮತ ಎಣಿಕೆ ಕಾರ್ಯ ಆಯೋಜನೆ ಮಾಡಲಾಗಿತ್ತು. ಮತ ಎಣಿಕಾ ಕೇಂದ್ರದಲ್ಲಿ ಮೂರು ವಿಭಾಗದಲ್ಲಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ. ಮತ ಎಣಿಕಾ ಕೇಂದ್ರದ ನೂರು ಮೀಟರ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಒಳಗೆ ಯಾರು ಬರುವಂತಿಲ್ಲ. ಅಭ್ಯರ್ಥಿಗಳಿಗೆ ಕೌಂಟಿಂಗ್ ಬೂತ್‌ಗಳಲ್ಲಿ ಕೂರುವ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕಾ ಸಿಬ್ಬಂದಿ, ಅಭ್ಯರ್ಥಿ, ಏಜೆಂಟ್‌ಗಳಿಗೆ ಕ್ಯೂಆರ್ ಕೋಡ್ ಇರುವಂತಹ ಗುರುತಿನ ಪತ್ರ ನೀಡಲಾಗಿದೆ.‌