


ಅಮರಾವತಿ (ಮೇ.2): ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಉಂಟಾಗಿರುವ ಭಾರಿ ಏರಿಕೆಯು ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ತಮ್ಮ ಆಹಾರ ಪದಾರ್ಥಗಳ ಬೆಲೆಯನ್ನು ಶೇ. 10ರಷ್ಟು ಹೆಚ್ಚಿಸಲು ನಿರ್ಧರಿಸಿವೆ ಎಂದು ಆಂಧ್ರಪ್ರದೇಶ ಸ್ಟಾರ್ ಹೋಟೆಲ್ಸ್ ಅಸೋಸಿಯೇಷನ್ ಶುಕ್ರವಾರ ತಿಳಿಸಿದೆ. ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಉಂಟಾಗಿರುವ ಏರುಪೇರಿನಿಂದಾಗಿ ಕೇಂದ್ರ ಸರ್ಕಾರವು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಬರೊಬ್ಬರಿ 993 ರೂಪಾಯಿ ಹೆಚ್ಚಿಸಿದೆ. ಇದರಿಂದಾಗಿ ಹೈದರಾಬಾದ್‌ನಂತಹ ನಗರಗಳಲ್ಲಿ ಪ್ರತಿ ಸಿಲಿಂಡರ್ ಬೆಲೆ ಸುಮಾರು 3,315 ರೂಪಾಯಿಗಳಿಗೆ ತಲುಪಿದೆ.
ಅಸೋಸಿಯೇಷನ್ ಅಧ್ಯಕ್ಷ ಆರ್.ವಿ. ಸ್ವಾಮಿ ಅವರು ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಮೇ 1ರಿಂದ ಜಾರಿಗೆ ಬಂದಿರುವ 993 ರೂ.ಗಳ ಏರಿಕೆಯು ಹೋಟೆಲ್ ಉದ್ಯಮಕ್ಕೆ ಮಾರಕವಾಗಿದೆ. ಇನ್‌ಪುಟ್ ವೆಚ್ಚ ಹೆಚ್ಚಾಗಿರುವುದರಿಂದ ಹೋಟೆಲ್ ಮಾಲೀಕರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ. ಕಳೆದ ಮೂರೇ ತಿಂಗಳಲ್ಲಿ ವಾಣಿಜ್ಯ ಗ್ಯಾಸ್ ಬೆಲೆಯು ಒಟ್ಟು 1,303 ರೂಪಾಯಿಗಳಷ್ಟು ಏರಿಕೆಯಾಗಿದೆ. ಕೇವಲ ಎಲ್‌ಪಿಜಿ ಮಾತ್ರವಲ್ಲದೆ, ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಬಳಸುವವರೂ ಸಹ ಜಾಗತಿಕ ಮಾರುಕಟ್ಟೆಯ ಏರಿಳಿತದಿಂದಾಗಿ ಆರ್ಥಿಕ ಹೊರೆ ಎದುರಿಸುತ್ತಿದ್ದಾರೆ.


