

ಬೆಂಗಳೂರು: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು 7 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸೂಚನೆ ಬೆನ್ನಲ್ಲೇ ಇಬ್ಬರು ಇಂಜಿನಿಯರ್‌ಗಳನ್ನ ಅಮಾನತುಗೊಳಿಸಲಾಗಿದೆ.

ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಆರ್.ಟಿ ರುದ್ರಮುನಿ, ಕಾರ್ಯನಿರ್ವಹಕ ಅಭಿಯಂತರ ಮೊಹಮದ್ ಜಾವೇದ್ ಇಬ್ಬರನ್ನು ಅಮಾನತುಗೊಳಿಸಿ ಜಿಬಿಎ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ.


ಡಿಸಿ ನೇತೃತ್ವದಲ್ಲಿ ತನಿಖೆಗೆ ಆದೇಶ
ಇನ್ನೂ ಪ್ರಕರಣವನ್ನ ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿದ್ದು, 7 ದಿನದೊಳಗಾಗಿ ತನಿಖಾ ವರದಿ ನೀಡುವಂತೆ ಆದೇಶ ಮಾಡಿದೆ. ತನಿಖಾ ಸಮಿತಿಯು ತಹಶೀಲ್ದಾರ್, PWD ನಿವೃತ್ತ ಮುಖ್ಯ ಇಂಜಿನಿಯರ್ ಸೇರಿದಂತೆ 6 ಜನರನ್ನು ಒಳಗೊಂಡಿದೆ. ಇನ್ನೂ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಅಮಾಯಕರು ಬಲಿಯಾದ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತ ಗಂಭೀರವಾಗಿ ಪರಿಗಣಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ಧ ಕೆಂಡಾಮಂಡಲರಾದ್ರು.
