


ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಉಷ್ಣ ಅಲೆ ಕಂಡುಬರುತ್ತಿದ್ದು, ಅಲ್ಲಲ್ಲಿ ಸಾಧಾರಣ ಪ್ರಮಾಣದ ಮಳೆಯಾಗುತ್ತಿದೆ. ಇಂದೂ ಸಹ ಕರಾವಳಿಯ ಭಾಗಗಳಲ್ಲಿ ಉಷ್ಣ ಅಲೆಯ ಮುನ್ಸೂಚನೆಯಿದ್ದು, ಹೀಟ್ ವೇವ್ನಿಂದ ತಪ್ಪಿಸಿಕೊಳ್ಳಲು ಯಾವೆಲ್ಲಾ ಮುಂಜಾಗೃತಾ ಕ್ರಮ ಕೈಗೊಳ್ಳಬೇಕೆಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೇಸಿಗೆಗೆ ಕಾಲಿಡುವಷ್ಟರಲ್ಲೇ ರಾಜ್ಯದಾದ್ಯಂತ ಉಷ್ಣ ಅಲೆ ಆವರಿಸಿದೆ. ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ ಹೆಚ್ಚಾಗಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಡಬಹುದೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈಗಾಗಲೇ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕವು ಬಿಸಿಲಿನ ಬೇಗೆ ತತ್ತರಿಸಿದ್ದು, ಮುಂಬರುವ ದಿನಗಳಲ್ಲಿ ಈ ಭಾಗಗಳ ತಾಪಮಾನ 45 ಡಿಗ್ರಿ ಸೆಲ್ಸಿಯಸ್ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.


ಕರಾವಳಿಯು ಬಿಸಿಲ ಬೇಗೆಯಲ್ಲಿ ಸುಡುತ್ತಿದೆ. ಉತ್ತರ ಕನ್ನಡದಲ್ಲಿ ಇಂದಿನ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇದ್ದು, ಇದು 42 ಡಿಗ್ರಿಗೂ ಏರಿಕೆಯಾಗಬಹುದು. ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿಯೂ ಹೆಚ್ಚಿನ ತಾಪಮಾನ ದಾಖಲಾಗಿದ್ದು, ಈ ನಡುವೆ ಸಾಧಾರಣ ಮಳೆಯಾಗುವ ಸಂಭವವೂ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ವಿಜಯಪುರ, ಕಲಬುರ್ಗಿ, ಬೀದರ್ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿಯೂ ಹೀಟ್ ವೇವ್ ಅಲರ್ಟ್ ನೀಡಲಾಗಿದೆ.
ಉಷ್ಣಾಘಾತದಿಂದ ರಕ್ಷಣೆ ಹೇಗೆ?
ಮುಂಬರುವ ದಿನಗಳಲ್ಲಿ ರಾಜ್ಯದೆಲ್ಲೆಡೆ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅವಶ್ಯಕತೆ ಇಲ್ಲದೆ ಮನೆಯಿಂದ ಹೊರಬರುವುದನ್ನು ತಪ್ಪಿಸುಂತೆ ಹೇಳಲಾಗಿದೆ. ಬೇಸಿಗೆ ರಜೆಯಲ್ಲಿ ಮಕ್ಕಳು ಬಿಸಿಲಲ್ಲಿ ಆಟವಾಡುವುದನ್ನು ಆದಷ್ಟು ನಿಯಂತ್ರಿಸುವಂತೆ ಸೂಚಿಸಲಾಗಿದೆ.
ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.
